ಲಿಂಗಸುಗೂರು ಸರಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಗಣತಂತ್ರ ದಿನಾಚರಣೆ ಸಂವಿಧಾನ ಅಧ್ಯಯನಕ್ಕೆ ಯುವಪೀಳಿಗೆ ಮುಂದಾಗಬೇಕು : ಶಾಸಕ ಹೂಲಗೇರಿ
ಲಿಂಗಸುಗೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರ ರಚನೆಯ ಸಂವಿಧಾನದ ಅಧ್ಯಯನಕ್ಕೆ ಯುವ ಪೀಳಿಗೆ ಮುಂದಾಗಬೇಕು ಎಂದು ಶಾಸಕ ಡಿ.ಎಸ್.ಹೂಲಗೇರಿ ಕರೆ ನೀಡಿದರು.
ಸ್ಥಳೀಯ ಸರಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಾ.ಅಂಬೇಡ್ಕರ್‍ರು ರಚಿಸಿದ ಸಂವಿಧಾನ ಜಗತ್ತಿಗೇ ಮಾದರಿಯಾಗಿದೆ. ಜಾತ್ಯಾತೀತ ನೆಲೆಗಟ್ಟಿನಲ್ಲಿ ದೇಶದ ಐಕ್ಯತೆ ಮತ್ತು ಅಭಿವೃದ್ಧಿಗಾಗಿ ಮುಂದಾಗುವ ಹೊಣೆ ಯುವ ಪೀಳಿಗೆ ಮೇಲಿದೆ. ದೇಶ ಗಣತಂತ್ರವಾಗಲು ನಮ್ಮ ಹಿರಿಯರು ಪಟ್ಟ ಶ್ರಮ ಹಾಗೂ ದೇಶಕ್ಕಾಗಿ ಸಲ್ಲಿಸಿದ ನಿಸ್ವಾರ್ಥ ಸೇವೆಗಳ ಕುರಿತು ಮೆಲುಕು ಹಾಕಿದವರು ಅವರ ಮಾರ್ಗದರ್ಶನದಲ್ಲಿ ನಾವು ನಡೆಯಬೇಕು ಎಂದರು.
ಕೊರೋನಾ ಮಹಾಮಾರಿಗೆ ಕೊವಿಶಿಲ್ಡ್ ಲಸಿಕೆಯನ್ನು ದೇಶದ ಪ್ರತಿಯೊಬ್ಬ ಪ್ರಜೆಗೆ ನೀಡುವ ಮೂಲಕ ನಮ್ಮ ದೇಶ ವಿಶ್ವಕ್ಕೆ ಮಾದರಿಯಾಗಿದೆ. ಕೊರೋನಾ ವೈರಸ್‍ನಿಂದಾಗಿ ವರ್ಷದಿಂದ ದೇಶದ ಬಡ ರೈತನಿಂದ ಹಿಡಿದು ವಿದೇಶದಲ್ಲಿರುವ ವಿಜ್ಞಾನಿಗಳವರೆಗೂ ವೈರಸ್ ಎಲ್ಲರನ್ನೂ ಬಾಧಿಸಿದೆ. ಇದರಿಂದಾಗಿ ದೇಶದ ಆರ್ಥಿಕತೆ ದೊಡ್ಡ ಪೆಟ್ಟು ಬಿದ್ದ ಪರಿಣಾಮ ಆರ್ಥಿಕ ಹಿಂಜರಿತ ಉಂಟಾಗಿದೆ. ಕೊವಿಶಿಲ್ಡ್ ಲಸಿಕೆಯನ್ನು ಕೊರೋನಾ ವಾರಿಯರ್ಸ್‍ಗೆ ಪ್ರಥಮವಾಗಿ ನೀಡಲಾಗುತ್ತಿದೆ. ಅದರಲ್ಲಿ ಮುಖ್ಯವಾಗಿ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಪ್ರಥಮ ಹಂತದಲ್ಲಿ ನೀಡಲಾಗಿದ್ದು, ಎರಡನೇ ಹಂತದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗುತ್ತಿದೆ ಎಂದು ಸಹಾಯಕ ಆಯುಕ್ತ ರಾಜಶೇಖರ ಡಂಬಳ ಮಾತನಾಡಿದರು.
ತಾ.ಪಂ.ಅಧ್ಯಕ್ಷೆ ಶ್ವೇತಾ ಪಾಟೀಲ್, ಪುರಸಭೆ ಅಧ್ಯಕ್ಷೆ ಗದ್ದೆಮ್ಮ ಭೋವಿ, ಡಿವೈಎಸ್‍ಪಿ ಎಸ್.ಎಸ್.ಹುಲ್ಲೂರು, ತಹಸೀಲ್ದಾರ ಚಾಮರಾಜ ಪಾಟೀಲ್, ತಾ.ಪಂ. ಇಓ ಲಕ್ಷ್ಮೀದೇವಿ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಸಮಾರಂಭದಲ್ಲಿದ್ದರು.

