ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮದೊಳಗೆ ನುಗ್ಗಿದ ಕಾಲುವೆ ನೀರು : ಆಕ್ರೋಶ
ಲಿಂಗಸುಗೂರು : ಕೆ.ಬಿ.ಜೆ.ಎನ್.ಎಲ್. ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲೂಕಿನ ಐದನಾಳ ಗ್ರಾಮದೊಳಗೆ ರಾಂಪುರ ಏತನೀರಾವರಿ ಯೋಜನೆಯ ಕಾಲುವೆ ನೀರು ನುಗ್ಗಿದ ಪರಿಣಾಮ ಜನರಿಗೆ ತೀವ್ರ ತೊಂದರೆಯಾಗಿದೆ. ಅಧಿಕಾರಿಗಳ ವರ್ತನೆಗೆ ಗ್ರಾಮಸ್ಥರಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಐದನಾಳ ಗ್ರಾಮದ ಹತ್ತಿರ ಇರುವ ರಾಂಪುರ ಏತನೀರಾವರಿ
ಯೋಜನೆಯ ಮುಖ್ಯ ಕಾಲುವೆ ನಿರ್ಮಾಣ ಹಂತದಲ್ಲಿಯೇ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ರೈತರು ತಮ್ಮ ಜಮೀನುಗಳಿಗೆ ನೀರು ಪಡೆದುಕೊಳ್ಳಲು ಕಾಲುವೆಯ ಗುಂಡಿಯನ್ನು ತಿರುವುತ್ತಾರೆ.
ಆಗನೀರಿನ ಒತ್ತಡ ಕಾಲುವೆಯಲ್ಲಿ ಹೆಚ್ಚಾಗುತ್ತದೆ. ಹೆಚ್ಚುವರಿ ನೀರು ಗ್ರಾಮದೊಳಗೆ ನುಗ್ಗುತ್ತದೆ. ಹಳ್ಳದ ರೀತಿ ಗ್ರಾಮದ
ಮುಖ್ಯರಸ್ತೆಯಲ್ಲಿ ಕಾಲುವೆ ನೀರು ಹರಿಯುವದರಿಂದ ಸಾರ್ವಜನಿಕರು ಪದೇ ಪದೇ ತೊಂದರೆಗೆ ಒಳಗಾಗುತ್ತಿದ್ದಾರೆ. ಕಳೆದ ವಾರವಷ್ಟೇ ಕಾಲುವೆಯ ಹೆಚ್ಚುವರಿ ನೀರು ಗ್ರಾಮದೊಳಗೆ ನುಗ್ಗಿತ್ತು. ತಾತ್ಕಾಲಿಕವಾಗಿ ತೇಪೆ ಸಾರಿಸಿದ ಅಧಿಕಾರಿಗಳು ಪುನಃ ನೀರು ಗ್ರಾಮದೊಳಗೆ ಬಂದ ಮಾಹಿತಿ ಕೇಳಿದರೂ ಇತ್ತ ಸುಳಿಯದೇ ನಿರ್ಲಕ್ಷ್ಯ ವಹಿಸಿದ್ದಾರೆಂದು ಗ್ರಾಮಸ್ಥರು ದೂರುತ್ತಾರೆ.
ಯೋಜನೆಯ ಮೇಲಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ
ಹೆಚ್ಚುವರಿ ನೀರು ಊರೊಳಗೆ ಹೋಗದಂತೆ ತಡೆಯಲು ಸಂಬಂಧಿಸಿದ ಇಂಜಿನಿಯರ್‍ರಿಗೆ ತಾಕೀತು ಮಾಡಿದ್ದರು. ಆದರೆ, ಸಕಾಲಕ್ಕೆ ಕಾರ್ಯಪ್ರವೃತ್ತರಾಗಬೇಕಿದ್ದ ಅಧಿಕಾರಿ ಕ್ರಮಕ್ಕೆ ಮುಂದಾಗದೇ ಇರುವ ಪರಿಣಾಮ ಸಮಸ್ಯೆ ಆಗಾಗ್ಗೆ ಉಂಟಾಗುತ್ತಿದೆ. ಗ್ರಾಮಸ್ಥರು ಮಾತ್ರ ಹೆಚ್ಚುವರಿ ನೀರಿನ ಸಮಸ್ಯೆಯಿಂದ ಬಸವಳಿಯುತ್ತಿದ್ದಾರೆ. ಕೆಲವರ ಓಲೈಕೆಗೆ ಮುಂದಾಗಿರುವ ಅಧಿಕಾರಿ ವಲಯ ಬಡ ರೈತರನ್ನು
ಸಂಕಷ್ಟಕ್ಕೆ ದೂಡಿದ್ದಾರೆನ್ನುವ ಮಾತುಗಳು ಗ್ರಾಮದಲ್ಲಿ
ಕೇಳಿಬರುತ್ತಿವೆ. ಕೂಡಲೇ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪದೇ ಪದೇ ಉಂಟಾಗುತ್ತಿರುವ ಹೆಚ್ಚುವರಿ ನೀರಿನ ತೊಂದರೆ ನಿವಾರಣೆಗೆ ಮುಂದಾಗಬೇಕೆನ್ನುವ ಒತ್ತಾಯ ಗ್ರಾಮಸ್ಥರದ್ದಾಗಿದೆ.
‘ಗ್ರಾಮದ ಹೊರವಲಯದಲ್ಲಿ ನಾಲೆ ನಿರ್ಮಾಣ ಮಾಡುವಾಗ ಒತ್ತಡದಿಂದ ಕೆಲಸ ಸಮರ್ಪಕವಾಗಿ ಮಾಡದೇ ಇರುವುದು ಈಗ ಸಮಸ್ಯೆಗೆ ಕಾರಣವಾಗಿದೆ. ಈಗಾಗಲೇ ಈ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.ಹೆಚ್ಚುವರಿ ನೀರು ಗ್ರಾಮದೊಳಗೆ ಬಾರದಂತೆ ತಡೆಯಲು ಕಾಲುವೆ
ದುರಸ್ತಿ ಕಾರ್ಯಕ್ಕೆ ಮುಂದಾಗಲಾಗುವುದು.’ – ನಾಗೇಶ,
ಇಂಜಿನಿಯರ್.

