ಕೆಕೆಆರ್‍ಡಿಬಿ ಕೆಲಸಗಳಲ್ಲಿ ಅಕ್ರಮ ನಡೆದಿಲ್ಲ : ಮಾಜಿ ಸಚಿವರಿಗೆ ಶಾಸಕ ಹೂಲಗೇರಿ ಟಾಂಗ್
ಲಿಂಗಸುಗೂರು : ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ
(ಕೆಕೆಆರ್‍ಡಿಬಿ)ಯಿಂದ ನಮ್ಮ ಅವಧಿಯಲ್ಲಿ ಪ್ರತಿವರ್ಷವೂ ಬಂದ
ಅನುದಾನದಲ್ಲಿ ಸಮರ್ಪಕವಾಗಿ ಕೆಲಸ ಮಾಡಲಾಗಿದೆ. ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂದು ಶಾಸಕ ಡಿ.ಎಸ್.ಹೂಲಗೇರಿ ಹೇಳುವ ಮೂಲಕ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್‍ರ ಹೇಳಿಕೆಗೆ ಟಾಂಗ್ ನೀಡಿದ್ದಾರೆ.
ತಾಲೂಕಿನ ಯರಡೋಣ ಗ್ರಾಮದ ಕಾರ್ಯಕ್ರಮವೊಂದರಲ್ಲಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿವರ್ಷವೂ ಕೆಕೆಆರ್‍ಡಿಬಿ ಯಿಂದ ಬರುವ ಅನುದಾನವನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತಿದೆ. ನಮ್ಮ ಕ್ಷೇತ್ರದಲ್ಲಿ ಯಾವುದೇ ರೀತಿಯ ಅಕ್ರಮ ಕೆಲಸ ಅಥವಾ ಅನುದಾನ ದುರ್ಬಳಕೆಯಂಥಹ ಕೃತ್ಯಗಳು ನಡೆದಿಲ್ಲ.ಗ್ರಾಮೀಣ ಪ್ರದೇಶಗಳಲ್ಲಿ ಹತ್ತಾರು ರಸ್ತೆಗಳು ಸೇರಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಈ ಬಗ್ಗೆ ಅಂಕಿ-ಅಂಶಗಳ ಸಮೇತ ದಾಖಲೆ ನೀಡಲಾಗುವುದು ಎಂದು ಹೇಳಿದರು.
ಕೆಕೆಆರ್‍ಡಿಬಿ ಅನುದಾನದಲ್ಲಿ ಭಾರೀ ಪ್ರಮಾಣದ ಅವ್ಯವಹಾರವಾಗಿದೆ ಎಂದು ಇತ್ತೀಚಿಗಷ್ಟೇ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್‍ರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದನ್ನು ಪತ್ರಕರ್ತರು ಪ್ರಸ್ತಾಪಿಸಿದಾಗ, ನಾನು ಇದಕ್ಕೇನೂ ಹೇಳುವುದಿಲ್ಲ. ಎಲ್ಲವನ್ನೂ ಪಕ್ಷದ
ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾವು ನಮ್ಮ ಕಾರ್ಯವ್ಯಾಪ್ತಿಯಲ್ಲಿ ಬಂದ ಅನುದಾನದಲ್ಲಿ ಅಕ್ರಮಕ್ಕೆ ಅವಕಾಶ ನೀಡದೇ ಸಮರ್ಪಕವಾಗಿ ಬಳಕೆ ಮಾಡಿಕೊಂಡಿದ್ದೇವೆಂದು ಶಾಸಕ ಹೂಲಗೇರಿ ಪುನರುಚ್ಛರಿಸಿದರು.
ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಭೂಪನಗೌಡ, ಹೊನ್ನಹಳ್ಳಿ ಗ್ರಾ.ಪಂ.
ಅದ್ಯಕ್ಷ-ಉಪಾದ್ಯಕ್ಷರು ಸೇರಿ ಪಕ್ಷದ ಮುಖಂಡರು ಈ ಸಂದರ್ಭದಲ್ಲಿ ಇದ್ದರು.

