ಶರಣಗೌಡ ಬಯ್ಯಾಪೂರರಿಗೆ ಎಂಎಲ್‍ಸಿ ಟಿಕೇಟ್ ನೀಡಲು ರಫಿ ಒತ್ತಾಯ
ಲಿಂಗಸುಗೂರು : ಕೆಪಿಸಿಸಿ ಸದಸ್ಯ, ಆರ್‍ಡಿಸಿಸಿ ಬ್ಯಾಂಕ್ ಮಾಜಿ ಅದ್ಯಕ್ಷರೂ ಆಗಿರುವ ಕಾಂಗ್ರೆಸ್ ಮುಖಂಡ ಶರಣಗೌಡ ಪಾಟೀಲ್ ಅವರಿಗೆ ಬರುವ ವಿಧಾನಪರಿಷತ್ ಚುನಾವಣೆಗೆ ಟಿಕೇಟ್ ನೀಡಬೇಕೆಂದು ಪುರಸಭೆ ಉಪಾದ್ಯಕ್ಷ ಮಹ್ಮದ್ ರಫಿ ಒತ್ತಾಯಿಸಿದರು.
ಈ ಬಗ್ಗೆ ಸ್ಥಳೀಯ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ದಶಕಗಳ ಕಾಲ ಕಾಂಗ್ರೆಸ್ ಪಕ್ಷ ಕಟ್ಟಲು ರಾಯಚೂರು-ಕೊಪ್ಪಳ ಜಿಲ್ಲೆಗಳಲ್ಲಿ ಶರಣಗೌಡರು ಶ್ರಮಿಸಿದ್ದು ಇತಿಹಾಸ. ಲಿಂಗಸುಗೂರು ಕ್ಷೇತ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಒಬ್ಬರಾಗಿರುವ ಶರಣಗೌಡರಿಗೆ ಈ ಬಾರಿ ಎಂಎಲ್‍ಸಿಯನ್ನಾಗಿ ಮಾಡುವ ಮೂಲಕ ಜನಸೇವೆಗೆ ಅವಕಾಶ ಮಾಡಿಕೊಡಬೇಕೆಂದು ರಾಯಚೂರು-ಕೊಪ್ಪಳ ಜಿಲ್ಲಾಧ್ಯಕ್ಷರುಗಳಿಗೆ ರಫಿ ಒತ್ತಾಯಿಸಿದರು.
ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ಜನರಿಗೆ ಚಿರಪರಿಚಿತರಾಗಿರುವ ಶರಣಗೌಡರು ಹತ್ತಾರು ಜನಪರ ಕಾರ್ಯಗಳನ್ನು ಮಾಡುವ ಮೂಲಕ ಜನ ಸಂಪರ್ಕದಲ್ಲಿರುವ ನಾಯಕರಾಗಿದ್ದಾರೆ. ಇವರಿಗೆ ಎಂಎಲ್‍ಸಿ ಮಾಡಿದ್ದೇ ಆದಲ್ಲಿ ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಮತ್ತಷ್ಟು ಗಟ್ಟಿಯಾಗುವಲ್ಲಿ ಯಾವುದೇ ಸಂದೇಹವಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಹೈಕಮಾಂಡ್ ಬಯ್ಯಾಪೂರ ಶರಣಗೌಡರಿಗೆ ಎಂಎಲ್‍ಸಿ ಟಿಕೇಟ್ ನೀಡಬೇಕೆಂದು ಹೇಳಿದರು.
ಪುರಸಭೆ ಸ್ಥಾಯಿ ಸಮಿತಿ ಅದ್ಯಕ್ಷ ಪ್ರಮೋದಕುಮಾರ, ಸದಸ್ಯರಾದ ರುದ್ರಪ್ಪ ಬ್ಯಾಗಿ, ಶಿವರಾಯ ದೇಗಲಮಡಿ, ಬಾಬುರೆಡ್ಡಿ ಮುನ್ನುರು, ಯಮನಪ್ಪಗೌಡ ಮೇಟಿ ಈ ಸಂದರ್ಭದಲ್ಲಿ ಇದ್ದರು.
