ಅವಿಭಾಗೀಕೃತ

ರಸ್ತೆ ಅಗಲೀಕರಣಕ್ಕೆ ಮುದಗಲ್ ಮುಖ್ಯಾಧಿಕಾರಿ ಮೀನಾಮೇಷ : ಕ್ರಮಕ್ಕೆ ಆಗ್ರಹ

ಲಿಂಗಸುಗೂರು : ತಾಲೂಕಿನ ಮುದಗಲ್ ಪಟ್ಟಣದ ಪ್ರಮುಖ ರಸ್ತೆ ಅಗಲೀಕರಣಕ್ಕೆ ಅಲ್ಲಿನ ಪುರಸಭೆ ಮುಖ್ಯಾಧಿಕಾರಿ ಮೀನಾಮೇಷ ಮಾಡುತ್ತಿರುವುದಲ್ಲದೇ, ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಮುಖ್ಯಾಧಿಕಾರಿ ಮೇಲೆ ಕ್ರಮಕ್ಕೆ ಮುಂದಾಗಬೇಕು. ನಿಯಮಾನುಸಾರ ರಸ್ತೆ ಮಧ್ಯಭಾಗದಿಂದ ಎರಡೂ ಕಡೆಗೆ ಐವತ್ತು ಅಡಿಗಳಷ್ಟು ಅಗಲ ರಸ್ತೆಯನ್ನು ತೆರವುಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಗ್ರಹಿಸಿದರು.


ಸಹಾಯಕ ಆಯುಕ್ತ ರಾಹುಲ್ ಸಂಕನೂರ್‍ಗೆ ಮನವಿ ಸಲ್ಲಿಸಿದ ಅವರು, ಕಳೆದ ಹನ್ನೊಂದು ವರ್ಷಗಳ ಹಿಂದೆ ಅಂದಿನ ಸಹಾಯಕ ಆಯುಕ್ತರಾಗಿದ್ದ ಉಜ್ವಲ್‍ಕುಮಾರ್ ಘೋಷ್‍ರು ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದರು. ಸರಕಾರಿ ಕಟ್ಟಡಗಳನ್ನು ಮೊದಲಿಗೆ ಒಡೆದು ಹಾಕಿದ್ದರು. ಬಡವರ ಕಟ್ಟಡಗಳನ್ನೂ ಹಿಂದೆಮುಂದೆ ನೋಡದೇ ನೆಲಸಮಗೊಳಿಸಿದ್ದರು. ಆದರೆ, ಕೆಲವು ಶ್ರೀಮಂತರ ಕಟ್ಟಡಗಳನ್ನು ತೆಗೆಯದೇ ಹಾಗೆಯೇ ಬಿಡಲಾಗಿತ್ತು. ರಸ್ತೆ ಪಕ್ಕ ವ್ಯಾಪಾರ ಮಾಡಿಕೊಂಡಿದ್ದ ಬಡವರ ಬದುಕು ಬೀದಿಪಾಲಾಗಿದೆ. ಆದರೆ, ಶ್ರೀಮಂತರಿಗೆ ಮಾತ್ರ ಆಡಳಿತ ಶ್ರೀರಕ್ಷೆ ನೀಡುತ್ತಿದೆ.


ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿ ರಸ್ತೆ ಅಗಲೀಕರಣಕ್ಕೆ ಅನುದಾನ ತಂದು ಭೂಮಿಪೂಜೆಯನ್ನೂ ನೆರವೇರಿಸಿದ್ದಾರೆ. ರಸ್ತೆ ತೆರವುಗೊಳಿಸಲು ಪುರಸಭೆ ಮುಖ್ಯಾಧಿಕಾರಿಗಳು ಒತ್ತಡಕ್ಕೆ ಮಣಿದಂತೆ ಕಾಣುತ್ತಿದೆ. 50 ಅಡಿಗಳ ಬದಲು 40 ಅಡಿಗಳಿಗೆ ಅಗಲ ಮಾಡುವಂತೆ ಕೆಲವರು ಒತ್ತಡ ಹೇರುತ್ತಿರುವುದರಿಂದ ಪುರಸಭೆಯವರು ಅವರಿಗೆ ಸಾಥ್ ನೀಡುತ್ತಿದ್ದಾರೆ. ಇದು ಅಧಿಕಾರಿಗಳ ತಾರತಮ್ಯ ಧೋರಣೆಗೆ ಸಾಕ್ಷಿಯಾಗಿದೆ.
ಕೂಡಲೇ ಮುಖ್ಯಾಧಿಕಾರಿಗಳ ಮೇಲೆ ಕ್ರಮಕ್ಕೆ ಮುಂದಾಗಬೇಕು. ರಸ್ತೆ ಅಗಲೀಕರಣವನ್ನು ಎರಡೂ ಕಡೆಗಳಲ್ಲೂ ಮಾಡಬೇಕೆಂದು ಒತ್ತಾಯಿಸಿದರು. ನಿತ್ಯ ಟ್ರಾಫಿಕ್ ಜಾಮ್ ಆಗುವ ಮೂಲಕ ಜನ ಪರದಾಡುತ್ತಿದ್ದಾರೆ. ತುರ್ತಾಗಿ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.


ಕರವೇ ಅದ್ಯಕ್ಷ ಜಿಲಾನಿಪಾಷಾ, ಮುದಗಲ್ ಅದ್ಯಕ್ಷ ನಯೂಮ್‍ಪಾಷಾ, ಪ್ರಧಾನ ಕಾರ್ಯದರ್ಶಿ ಶಿವರಾಜ ನಾಯಕ್, ಉಪಾದ್ಯಕ್ಷ ಚಂದ್ರು ನಾಯಕ, ನಗರ ಘಟಕ ಅದ್ಯಕ್ಷ ಹನುಮಂತ ನಾಯಕ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!