ತಾಲೂಕಾ ಕೇಂದ್ರದಲ್ಲಿ ಭತ್ತ ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯ
ಲಿಂಗಸುಗೂರು : ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಲ್ಲಿಯೂ ಭತ್ತ ಖರೀದಿ ಕೇಂದ್ರವನ್ನು ಆರಂಭ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಕಾರ್ಯಕರ್ತರು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯವರಿಗೆ ಒತ್ತಾಯಿಸಿದರು.
ಈ ಬಗ್ಗೆ ಮನವಿ ಸಲ್ಲಿಸಿದ ಅವರು, ಈಗಾಗಲೇ ಭತ್ತದ ಬೆಳೆಯ ರಾಶಿಯಾಗಿದ್ದು, ರೈತರು ಭತ್ತವನ್ನು ಮನೆಗಳಲ್ಲಿ, ಗೋದಾಮಿನಲ್ಲಿ ಸಂಗ್ರಹ ಮಾಡಿಟ್ಟುಕೊಂಡಿದ್ದಾರೆ. ಸಧ್ಯಕ್ಕೆ ಬೆಲೆಯೂ ಕಡಿಮೆ ಇದ್ದು ಇದಕ್ಕೆ ವೈಜ್ಞಾನಿಕ ಬೆಂಬಲ ಬೆಲೆಯನ್ನು ನಿಗದಿಪಡಿಸಿ ಪ್ರತಿ ತಾಲೂಕು ಕೇಂದ್ರದಲ್ಲಿನ ಎಪಿಎಂಸಿ ಮಾರುಕಟ್ಟೆಗಳಲ್ಲಿ ಖರೀದಿ ಕೇಂದ್ರವನ್ನು ಆರಂಭ ಮಾಡುವ ಮೂಲಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರಕಾರ ಧಾವಿಸಬೇಕೆಂದು ಒತ್ತಾಯಿಸಿದರು.
ಕೋವಿಡ್‍ನಿಂದ ದೇಶ ಹಾಗೂ ರಾಜ್ಯದ ಜನರನ್ನು ರಕ್ಷಣೆ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಫಲವಾಗಿದ್ದು, ಕೂಡಲೇ ಎಚ್ಚೆತ್ತುಕೊಂಡು ಸೊಂಕಿತರಿಗೆ ಅಗತ್ಯ ಚಿಕಿತ್ಸೆಗೆ ಮುಂದಾಗಬೇಕು. ರಾಯಚೂರು ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್, ಆಕ್ಸಿಜನ್, ಔಷಧ ಸೇರಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ರೋಗಿ ಔಷಧ, ಆಕ್ಸಿಜನ್ ಕೊರತೆಯಿಂದ ನರಳದಂತೆ ಎಚ್ಚರಿಕೆ ವಹಿಸಬೇಕು. ತಾಲೂಕಿನ ನರಕಲದಿನ್ನಿ ಪಂಚಾಯಿತಿ ಪಿಡಿಒ ಅಮಾನತ್ತುಗೊಂಡಿದ್ದು, ಅವರ ಜಾಗಕ್ಕೆ ಬೇರೆಯವರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್, ಸಂಘಟನೆ ಜಿಲ್ಲಾ ಗೌರವಾದ್ಯಕ್ಷ ಮಲ್ಲನಗೌಡ ಪಾಟೀಲ್ ರಾಂಪುರ, ತಾಲೂಕು ಅದ್ಯಕ್ಷ ಅಮರೇಶ ಸರಕಾರ, ಭೀಮ್ ಆರ್ಮಿ ಗೌರವಾದ್ಯಕ್ಷ ಖಾಲಿದ್ ಚಾವೂಸ್, ಲಕ್ಕಪ್ಪ ಕಮಲದಿನ್ನಿ ಸೇರಿ ಇತರರು ಇದ್ದರು.

