ಕೃಷ್ಣೆಗೆ 1.80 ಲಕ್ಷ ಕ್ಯೂಸೆಕ್ ನೀರು : ಮತ್ತೆ ಮುಳುಗಿದ ಶೀಲಹಳ್ಳಿ ಸೇತುವೆ
ಲಿಂಗಸುಗೂರು : ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಕೋಯ್ನಾ ಜಲಾಶಯದಿಂದ ಆಲಮಟ್ಟಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಆಲಮಟ್ಟಿಯಿಂದ ತಾಲೂಕಿನ ಬಸವಸಾಗರ ಜಲಾಶಯಕ್ಕೆ 1.65 ಲಕ್ಷ ಕ್ಯೂಸೆಕ್ ನೀರು ಬರುತ್ತಿದ್ದು, ಅಣೆಕಟ್ಟೆಯ ಭದ್ರತೆ ದೃಷ್ಠಿಯಿಂದ ಕೃಷ್ಣಾ ನದಿಗೆ 1.80 ಲಕ್ಷ ನೀರನ್ನು ಹರಿಬಿಡಲಾಗುತ್ತಿದೆ ಎನ್ನುವ ಮಾಹಿತಿ ಅಣೆಕಟ್ಟೆ ಮೂಲದಿಂದ ಲಭ್ಯವಾಗಿದೆ.
ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಬಿಟ್ಟಿದ್ದರಿಂದ ತಾಲೂಕಿನ ಶೀಲಹಳ್ಳಿ ಸೇತುವೆ ಮತ್ತೆ ಮುಳುಗಡೆಯಾಗಿದೆ. ಇದರಿಂದ ಯರಗೋಡಿ, ಯಳಗುಂದಿ, ಕಡದರಗಡ್ಡಿ, ಹಂಚಿನಾಳ ಗ್ರಾಮಸ್ಥರಿಗೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಜಲದುರ್ಗ ಮಾರ್ಗವಾಗಿ ಸುತ್ತುವರೆದು ಓಡಾಡುವ ಅನಿವಾರ್ಯತೆ ಪುನಃ ಬಂದೊದಗಿದೆ. ಈ ಬಾರಿ ಮಳೆಗಾಲದಲ್ಲಿ ಎರಡನೇ ಬಾರಿಗೆ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ಜನರ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ.

