ಲಿಂಗಸುಗೂರು ಸರಕಾರಿ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಒತ್ತಾಯ
ಲಿಂಗಸುಗೂರು : ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಹಟ್ಟಿ ಚಿನ್ನದಗಣಿ ಅಧ್ಯಕ್ಷ ಮಾನಪ್ಪ ಡಿ. ವಜ್ಜಲ್ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ. ಸುಧಾಕರರನ್ನ ಒತ್ತಾಯಿಸಿದರು.
ವೈದ್ಯರ ತಂಡದೊಂದಿಗೆ ಸಚಿವರಿಗೆ ಭೇಟಿ ನೀಡಿದ ಅವರು, ತಾಲೂಕಿನ ವಿವಿಧ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಹಾಗೂ ಸುತ್ತಮುತ್ತಲಿನ ತಾಲೂಕುಗಳ ಜನರಿಗೂ ಆಸರೆಯಾಗಿರುವ ಸರಕಾರಿ ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಮುಂದಾಗಬೇಕು.
ಈ ಭಾಗದ ಬಡ ಜನರ ನೆಚ್ಚಿನ ಆಸ್ಪತ್ರೆ ಇದಾಗಿದ್ದು, ವೈದ್ಯರ ನೇಮಕದ ಜೊತೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಕೊಡುವಂತೆ ಒತ್ತಾಯಿಸಿದರು.
ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ರುದ್ರಗೌಡ ಪಾಟೀಲ್, ಬಿಜೆಪಿ ಹಿರಿಯ ಮುಖಂಡರಾದ ಡಾ. ಶಿವಬಸಪ್ಪ ಹೆಸರೂರು, ಡಾ. ಎನ್.ಎಲ್. ನಡುವಿನಮನಿ ಈ ಸಂದರ್ಭದಲ್ಲಿ ಇದ್ದರು.

