ರಾಯಚೂರು ಬರಹಗಾರರ ಬಳಗ ಜಿಲ್ಲಾ ಘಟಕದ ಪೂರ್ವಭಾವಿ ಸಭೆ
ಲಿಂಗಸುಗೂರು : ಕರ್ನಾಟಕ ರಾಜ್ಯ ಬರಹಗಾರರ ಬಳಗ ರಾಯಚೂರು ಜಿಲ್ಲಾ ಘಟಕದ ಪೂರ್ವಭಾವಿ ಸಭೆ ಸಿಂಧನೂರು ನಗರದ ಸಂಗೀತಧಾಮ ಕರೋಕೆ ಸ್ಟುಡಿಯೋದಲ್ಲಿ ಜರುಗಿತು.
ಬಳಗದ ಜಿಲ್ಲಾಧ್ಯಕ್ಷ ವೀರೇಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ನೇಮಕ, ತಾಲೂಕು ಘಟಕಗಳ ಸ್ಥಾಪನೆ, ಸದಸ್ಯತ್ವ ನೋಂದಣಿ, ಪದಾಧಿಕಾರಿಗಳ ಪದಗ್ರಹಣ, ಕವಿಗಳಿಗೆ – ಬರಹಗಾರರಿಗೆ ವೇದಿಕೆ ಕಲ್ಪಿಸುವುದು, ಹಿರಿಯ ಸಾಹಿತಿಗಳಿಂದ ನವ ಬರಹಗಾರರಿಗೆ ಮಾರ್ಗದರ್ಶನ ನೀಡುವುದು, ಎಲೆ ಮರೆಯ ಕಾಯಿಯಂತೆ ಇರುವ ನವ ಬರಹಗಾರರನ್ನು ಗುರುತಿಸುವುದು ಸೇರಿ ಇನ್ನಿತರ ವಿಷಯಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು.
ಮೈಸೂರಿನಲ್ಲಿ ಮಾರ್ಚ್ 14 ರಂದು ನಡೆಯಲಿರುವ ಬಾರಹಗಾರರ ಬಳಗದ ಮಹಿಳಾ ಸಾಹಿತ್ಯ ಸಂಭ್ರಮ ಜರುಗಲಿದೆ. ಸಮಾರಂಭದಲ್ಲಿ ಮಹಿಳಾ ಸಾಹಿತಿಗಳಿಗೆ ಪ್ರಶಸ್ತಿ ಪುರಸ್ಕಾರ ಪ್ರದಾನ ಮಾಡಲಿದ್ದು, ಪ್ರಶಸ್ತಿಗೆ ಸಿಂಧನೂರಿನ ಯುವ ಸಾಹಿತಿ ಸಂಗೀತಾ ಸಾರಂಗಮಠ ಅವರನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ ಕವಿಗೋಷ್ಠಿಯಲ್ಲಿ ಶಾಂತ ಮಹೇಶ್ ಒಳಗಿನಮನಿ ಅವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷರು ತಿಳಿಸಿದರು.
ಬಗಳದ ಜಿಲ್ಲಾ ಉಪಾಧ್ಯಕ್ಷರಾದ ಶಿವಲೀಲಾ ಹಿರೇಮಠ್, ಹಾಜಿಬಾಬಾ ಕರಡಕಲ್, ಸಿಂಧನೂರು ತಾಲೂಕು ಅಧ್ಯಕ್ಷ ಮಂಜುನಾಥ, ಲಿಂಗಸುಗೂರು ತಾಲೂಕಿನ ಅಧ್ಯಕ್ಷ ದುರ್ಗಾಸಿಂಗ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆಬಿ ಹಿರೇಮಠ, ಜಿಲ್ಲಾ ಗೌರವ ಸಲಹೆಗಾರ ಖಾಜಾಹುಸೇನ್, ಶರಣಬಸವ ಸೇರಿ ಇತರರು ಸಭೆಯಲ್ಲಿದ್ದರು.
ಸಾಹಿತಿಗಳಾದ ಸಂಗೀತ ಸಾರಂಗಮಠ ರಚಿಸಿದ ಕಾಡದಿರುವ ನೆನಪೆ ಕವನ ಸಂಕಲನ, ಶಾಂತ ಮಹೇಶ್ ಒಳಗಿನಮನಿ ರಚಿಸಿರುವ ಏಕಾಂಗಿ ಚುಟುಕು ಸಂಕಲನ, ಬರೆಯಲು ನಿನ್ನ ಕವನ ಸಂಕಲನ ಪುಸ್ತಕಗಳನ್ನು ಸಭೆಯ ಬಳಿಕ ಪದಾಧಿಕಾರಿಗಳಿಗೆ ಉಡುಗೊರೆಯಾಗಿ ನೀಡಲಾಯಿತು.

