ರಾಯಚೂರು

ಲಿಂಗಸುಗೂರು : ಶಿಕ್ಷಕ-ವಿದ್ಯಾರ್ಥಿಗಳಿಗೆ ಗಣಿತ ಮೇಳ

ಲಿಂಗಸುಗೂರು : 1 ರಿಂದ 10 ನೇ ತರಗತಿಯ ಗಣಿತ ಕಲಿಕಾ ಸಾಮರ್ಥ್ಯಗಳನ್ನು ಆಧರಿಸಿ ಶಿಕ್ಷಕರು ತಯಾರಿಸಿದ ಕಲಿಕೋಪಕರಣಗಳ ಪ್ರದರ್ಶನ ಹಾಗೂ ಪ್ರಸ್ತುತಿ ಕಾರ್ಯಕ್ರಮವನ್ನು ಅಜಿಂಪ್ರೆಂಜಿ ಫೌಂಡೇಶನ್ ರವರು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಒಂದರಿಂದ 10ನೇ ತರಗತಿಯ ಸುಮಾರು 60 ಸಾಮರ್ಥ್ಯಗಳ ಆಧಾರಿತವಾಗಿ ವಿಭಿನ್ನ ರೀತಿಯಲ್ಲಿ ಸೃಜನಾತ್ಮಕವಾಗಿ ಕಲಿಕೋಪಕರಣಗಳನ್ನು ಅಜಿಂ ಪ್ರೆಂಜಿ ತಂಡದವರ ಮಾರ್ಗದರ್ಶನದಂತೆ ಶಿಕ್ಷಕರು ತಯಾರಿಸಿಕೊಂಡು, ವೀಕ್ಷಣೆಗೆ ಆಗಮಿಸಿದಂತಹ ಸ್ಥಳೀಯ ವಿದ್ಯಾರ್ಥಿಗಳಿಗೆ ಹಾಗೂ ತಾಲೂಕಿನ ಎಲ್ಲ ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗೆ, ಅಧಿಕಾರಿ ವರ್ಗದವರಿಗೆ ಪ್ರಸ್ತುತಪಡಿಸಿದರು.

ನೀತಿ ಆಯೋಗದ ಯೋಜನೆ ಅಡಿಯಲ್ಲಿ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳನ್ನು ವಿಶೇಷ ಜಿಲ್ಲೆಗಳೆಂದು ಪರಿಗಣಿಸಿ ಇಲ್ಲಿ ಗಣಿತದ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗಣಿತದ ಕಲಿಕೆಗೆ ಅನುವುಗೊಳಿಸಲು ಆ ವಿದ್ಯಾರ್ಥಿಗಳನ್ನು ಮುನ್ನೆಲೆಗೆ ತರಲು ವಿಭಿನ್ನ ವಿಧಾನಗಳನ್ನು ಕಲಿಕೋಪಕರಣದೊಂದಿಗೆ ಬೋಧಿಸಲು ಪ್ರೇರಣೆಯಾಗುವ ಕಾರ್ಯಕ್ರಮವನ್ನು ವಸ್ತು ಪ್ರದರ್ಶನದ ರೀತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಪ್ರದರ್ಶನದ ವೀಕ್ಷಣೆಗೆ ಆಗಮಿಸಿದಂತಹ ಶಿಕ್ಷಕರು ಕಲಿಕೋಪಕರಣ ವೀಕ್ಷಿಸಿ ಅದರ ಕುರಿತಾಗಿ ಹಿಮ್ಮಾಹಿತಿ ನೀಡಲು ಬಾರ್ ಕೋಡ್ ಸ್ಕ್ಯಾನರ್ ಅನ್ನು ಅಳವಡಿಸಿದ್ದರು. ವೀಕ್ಷಿಸಿದ ಎಲ್ಲ ಶಿಕ್ಷಕರು ಬಾರ್ಕೋಡ್ ಸ್ಕ್ಯಾನರ್ ಮೂಲಕ ಮಾಹಿತಿ ನೀಡುತ್ತಿದ್ದರು.
ಈ ಕಾರ್ಯಕ್ರಮ ಆಯೋಜನೆಗೆ ಕ್ಷೇತ್ರಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಶಿಕ್ಷಣ ಸಂಯೋಜಕರು, ಬಿ ಆರ್ ಪಿ ಗಳು, ಸಿ ಆರ್ ಪಿ ಗಳು ಹಾಗೂ ಶಾಲೆಯ ಮುಖ್ಯಗುರುಗಳು ಹಾಗೂ ಶಿಕ್ಷಕ ಸಂಘದವರ ಸಹಕಾರದಿಂದ ಜಾತ್ರೆಯ ಮಾದರಿಯಲ್ಲಿ ಪ್ರದರ್ಶನ ನಡೆಯಿತು.

ತಾ.ಪಂ. ಅಧ್ಯಕ್ಷೆ ಶ್ವೇತಾ ಪಾಟೀಲ್, ತಹಸಿಲ್ದಾರ್ ಚಾಮರಾಜ್ ಪಾಟೀಲ್,
ಕ್ಷೇತ್ರಶಿಕ್ಷಣಾಧಿಕಾರಿ ಹುಂಬಣ್ಣ ರಾಥೋಡ್, ಕ್ಷೇತ್ರ ಸಮನ್ವಯಾಧಿಕಾರಿ, ಅಕ್ಷರ ದಾಸೋಹ ನಿರ್ದೇಶಕರು, ದೈಹಿಕ ಶಿಕ್ಷಣ ಅಧಿಕಾರಿಗಳು ವಿವಿಧ ಸಂಘದ ಅಧ್ಯಕ್ಷರು ಅಜಿಂಪ್ರೆಂಜಿ ಫೌಂಡೇಶನ್ ತಾಲೂಕು ನೋಡಲ್ ಅಧಿಕಾರಿಗಳು ಸೇರಿ ಇತರರು ಭಾಗವಹಿಸಿದ್ದರು.

ಗಣಿತ ಮೇಳದಲ್ಲಿ ವಿಷಯ ಪ್ರಸ್ತುತಪಡಿಸಿದ ಶಿಕ್ಷಕರಿಗೆ ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *

error: Content is protected !!