ಹಿಂಬಂಡಿಯಾದ ಟಿಪ್ಪರ್ : ತಪ್ಪಿದ ಅನಾಹುತ
ಲಿಂಗಸುಗೂರು : ಸ್ಥಳೀಯ ಬಸ್‍ನಿಲ್ದಾಣ ವೃತ್ತದ ಬಳಿ ಅಗತ್ಯಕ್ಕಿಂತ ಹೆಚ್ಚಿನ ಕಬ್ಬಿಣದ ಸರಳುಗಳನ್ನು ಹೊತ್ತೊಯ್ಯುತ್ತಿದ್ದ ಟಿಪ್ಪರ್ ರೋಡ್‍ಹಂಪ್ಸ್ ಏರಲಾಗದೇ ಸರಳುಗಳ ಭಾರಕ್ಕೆ ಹಿಂಬಂಡಿಯಾಯಿತು. ಅದೃಷ್ಟವಶಾತ್ ಟಿಪ್ಪರ್ ಹಿಂಭಾಗ ಯಾವುದೇ ವಾಹನ, ಜನರು ಬಾರದೇ ಇರುವ ಕಾರಣ ಭಾರೀ ಪ್ರಮಾಣದ ಅನಾಹುತವಾಗುವುದು ತಪ್ಪದಂತಾಗಿದೆ.
ಹೆಚ್ಚಿನ ಭಾರ ಹಾಕುವ ಇಂಥಹ ವಾಹನ ಸವಾರರು ಜನರಿಗೆ ತೊಂದರೆ ನೀಡುವುದಂತೂ ಸುಳ್ಳಲ್ಲ. ಬೆಳಗಿನ ಸಮಯವಾದ್ದರಿಂದ ಹೆಚ್ಚಿನ ವಾಹನಗಳ ಓಡಾಟ ರಸ್ತೆಯಲ್ಲಿ ಇರಲಿಲ್ಲ. ಸದಾ ವಾಹನಗಳಿಂದ ತುಂಬಿರುವ ಈ ರಸ್ತೆ ಇಂದು ಬೆಳಗ್ಗೆ ಟಿಪ್ಪರ್ ಹಿಂಬಂಡಿಯಾಗುವಾಗ ಖಾಲಿಯಾಗಿತ್ತು. ಯಾವುದಾದರೂ ವಾಹನ ಹಿಂಬದಿಯಲ್ಲಿ ಇದ್ದಿದ್ದರೆ ಪ್ರಾಣಕ್ಕೆ ಸಂಚಕಾರ ಬರುವುದರಲ್ಲಿ ಸಂದೇಹವಿದ್ದಿಲ್ಲ.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೋಲಿಸರು ಸಂಚಾರ ದಟ್ಟಣೆಯನ್ನು ನಿಯಂತ್ರಿಸಿದರು. ಹಿಂಬಂಡಿಯಾಗಿರುವ ಟಿಪ್ಪರ್ ನೋಡಲು ಜನ ತಂಡೋಪತಂಡವಾಗಿ ಆಗಮಿಸುತ್ತಿರುವ ಕಂಡು ಬಂತು. ಒಂದೆರಡು ಗಂಟೆಗಳಲ್ಲಿ ಜೆಸಿಬಿ ಯಂತ್ರದ ಸಹಾಯದ ಮೂಲಕ ಸರಳುಗಳನ್ನು ಲಾರಿಯಲ್ಲಿ ಹಾಕಿಕೊಂಡು ತೆರಳಿದರು.

