1400 ಕೋಟಿ ರೂಪಾಯಿ ಕಾಮಗಾರಿ ಆರಂಭಕ್ಕೂ ಮುನ್ನವೇ ಭಾರೀ ಸುದ್ದಿ ಪೂರ್ವ ಸಿದ್ಧತೆಯಲ್ಲಿದ್ದ ಎನ್‍ಡಿಡಬ್ಲೂ ಕಂಪನಿಯ ಮೇಲಿನ ಆರೋಪ ನಿಜವೇ..?
ಖಾಜಾಹುಸೇನ್
ಲಿಂಗಸುಗೂರು : ನೀರಾವರಿಗೆಂದು 1400 ಕೋಟಿ ರೂಪಾಯಿಗಳ ಕಾಮಗಾರಿ ಟೆಂಡರ್ ಆಗಿದ್ದು, ಕಾಮಗಾರಿ ಆರಂಭಕ್ಕೆಂದು ಎನ್‍ಡಿಡಬ್ಲೂ ಕಂಪನಿಯು ಪೂರ್ವ ಸಿದ್ಧತೆಯಲ್ಲಿ ತೊಡಗಿಕೊಂಡಿರುವಾಗಲೇ ರಾಜ್ಯಾದ್ಯಂತ ಭಾರೀ ಸುದ್ದಿಗೆ ಕಾರಣವಾಗಿರುವುದು ವಿಶೇಷವಾಗಿದೆ. ವರ್ಕಾರ್ಡರ್ ಇಲ್ಲದೇ ಕೆಲಸ ಆರಂಭಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪತ್ರಿಕೆ ಸತ್ಯಾಸತ್ಯತೆಯನ್ನು ಕಂಡುಕೊಳ್ಳಲು ಮುಂದಾದಾಗ, ಇನ್ನೂ ಕೆಲಸ ಆರಂಭವಾಗಿಲ್ಲ. ಬದಲಿಗೆ ಕೆಲಸದ ಆರಂಭಕ್ಕೆ ಸಿದ್ಧತೆ ನಡೆದಿರುವುದು ಕಂಡು ಬಂತು.
ಟೆಂಡರ್ ಫೈನಲ್ ಆದ ಮೇಲೆ ಕಂಪನಿಯು ಕೆಲಸ ಆರಂಭಿಸಲು ಟೆಂಟ್ ಹಾಕಲು, ಮರಮ್, ಕಂಕರ್, ರಾಡ್, ಸಿಮೆಂಟೆ ಕಾರ್ಮಿಕರಿಗೆ ಶೆಡ್‍ಗಳ ನಿರ್ಮಾಣ ಸೇರಿ ಕ್ಯಾಂಪ್ ಹಾಕಿಕೊಳ್ಳುವ ಕೆಲಸ ಆರಂಭಿಸಿದೆ. ಇದನ್ನೇ ಅಪಾರ್ಥ ಮಾಡಿಕೊಂಡ ಕೆಲವರು ವರ್ಕಾರ್ಡರ್ ಇಲ್ಲದೇ ಕೆಲಸ ಆರಂಭವಾಗಿದೆ ಎಂದು ಆರೋಪಿಸಿ, ರಾಜ್ಯಾದ್ಯಂತ ಸುದ್ದಿಯಾಗಲು ಕಾರಣರಾಗಿದ್ದಾರೆನ್ನುವ ಮಾತುಗಳು ಕೇಳಿ ಬರುತ್ತಿವೆ. ಗುತ್ತೇದಾರರು ಕಾಮಗಾರಿಯಲ್ಲಿ ಕೋಟಿ ಕೋಟಿ ಲೂಟಿ ಹೊಡೆಯುತ್ತಿದ್ದಾರೆ. ಪ್ರಭಾವಿಗಳ ಒತ್ತಡದಿಂದ ಸರಕಾರ ಈ ಕಂಪನಿಯ ಬೆನ್ನಿಗಿದೆ ಎನ್ನುವ ಸುದ್ದಿಗಳು ರಾಜ್ಯವ್ಯಾಪಿ ಪಸರಿಸಿ ಕಂಪನಿಯನ್ನು ಪೇಚಿಗೆ ಸಿಲುಕಿಸಿದ್ದಂತೂ ಸುಳ್ಳಲ್ಲ.
ವಾಡಿಕೆಯಂತೆ ಟೆಂಡರ್ ಫೈನಲ್ ಆದ ಬಳಿಕ ಪೂರ್ವಭಾವಿಯಾಗಿ ನೀರಾವರಿ ಯೋಜನೆಗೆಂದು ಎನ್.ಡಿ.ಡಬ್ಲೂ. ಕಂಪನಿ ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ಕಾಲುವೆ ಕೆಲಸ ಆರಂಭಿಸಲು ಕ್ಯಾಂಪ್ ಹಾಕುವ ಕೆಲಸ ಜಾರಿಯಲ್ಲಿತ್ತು. ಕೆಲಸದ ಆದೇಶ ಇಲ್ಲದೇ ಕೆಲಸ ಆರಂಭಿಸಿದ್ದಿಲ್ಲ. ಬೇರೆಯವರ ಕೆಲಸವನ್ನು ತೋರಿಸುವ ಮೂಲಕ ಎನ್‍ಡಿಡಬ್ಲೂ ಕಂಪನಿಯ ವಿರುದ್ಧ ವ್ಯವಸ್ಥಿತವಾದ ಹುನ್ನಾರ ನಡೆದಿದೆ ಎನ್ನಲಾಗುತ್ತಿದೆ.
ಮಾನ್ಯತೆ ಹೊಂದಿರುವ ಬೃಹತ್ ಕಂಪನಿಯ ವಿರುದ್ಧ ಆಗದೇ ಇರುವವರು ಇಲ್ಲಸಲ್ಲದ ಆರೋಪ ಮಾಡಿ ಕಂಪನಿಗೆ ಕೆಟ್ಟ ಹೆಸರು ತರಲು ಮುಂದಾಗುತ್ತಿದ್ದಾರೆನ್ನುವ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಕೆ.ಬಿ.ಜೆ.ಎನ್.ಎಲ್. ಮೇಲಧಿಕಾರಿಗಳು ಕೂಡಲೇ ತನಿಖೆ ಮಾಡಿ ಇನ್ನೂ ಆರಂಭವಾಗದೇ ಕೆಲಸದ ಬಗ್ಗೆ ಇಷ್ಟೊಂದು ದೊಡ್ಡಮಟ್ಟದಲ್ಲಿ ಸುದ್ದಿಯಾಗಲು ಯಾರು ಕಾರಣರಾದರು..? ಅವರಿಗೆ ಇದರಿಂದ ಏನು ಲಾಭ..? ಎನ್‍ಡಿಡಬ್ಲೂ ಕಂಪನಿಗೆ ಸಂಬಂಧಿಸಿದಂತೆ ಈ ಭಾಗದ ಪ್ರತಿಷ್ಠಿತ ರಾಜಕೀಯ ನಾಯಕರ ನಂಟು ಇರುವುದರಿಂದ ಇಷ್ಟೊಂದು ಮಹತ್ವ ಪಡೆದಿದೆಯೇ..? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಜೊತೆಗೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಬೇಕೆನ್ನುವ ಒತ್ತಾಯಗಳು ಸಾರ್ವಜನಿಕರಲ್ಲಿ ಕೇಳಿ ಬರುತ್ತಿವೆ. ಎಷ್ಟರ ಮಟ್ಟಿಗೆ ನಿಗಮದ ಹಿರಿಯ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಾರೋ ಕಾದು ನೋಡೊಣ.
‘ಪ್ರತಿಷ್ಠಿತ ಎನ್‍ಡಿ ವಡ್ಡರ್ ಕಂಪನಿಗೆ ಕಾಮಗಾರಿಗೆ ಟೆಂಡರ್ ಆಗಿದೆ. ವರ್ಕಾರ್ಡರ್ ಇಲ್ಲದೇ ಕೆಲಸ ಆರಂಭಿಸಲು ಬರುವುದಿಲ್ಲ. ನಾವೂ ಕೂಡ ಕೆಲಸ ಆರಂಭಿಸಿಲ್ಲ. ಕಾಮಗಾರಿ ಆರಂಭಿಸಲು ಪೂರ್ವ ತಯಾರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಕ್ಯಾಂಪ್ ಹಾಕುತ್ತಿದ್ದೇವೆ. ಬೇಕಾದ ಅಗತ್ಯ ಸಲಕರಣೆ, ಸಾಮಗ್ರಿಗಳನ್ನು ಜೋಡಿಸಿಕೊಳ್ಳುತ್ತಿದ್ದೇವು. ಇದೇ ಅಪರಾಧ ಎನ್ನುವಂತೆ ಕೆಲ ಮಾಧ್ಯಮಗಳಲ್ಲಿ ನಮಗೆ ಆಗದವರು ಬಿಂಬಿಸಿದ್ದಾರೆ. ನಾವು ಎಲ್ಲಿಯೂ ಯಾವುದೇ ಮೋಸದ ಕೆಲಸ ಮಾಡಿಲ್ಲ. ಸರಕಾರದ ಹಾಗೂ ನೀರಾವರಿ ಇಲಾಖೆಯ ನಿಯಮಾನುಸಾರವೇ ಕೆಲಸ ಮಾಡುತ್ತೇವೆ. ನಮ್ಮ ಕಂಪನಿಯ ವಿರುದ್ಧ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಧ್ಯಕ್ಕೆ ಅಧಿಕಾರಿಗಳ ಸೂಚನೆಯಂತೆ ಕ್ಯಾಂಪ್ ಕೆಲಸವನ್ನೂ ಸ್ಥಗಿತಗೊಳಿಸಿದ್ದೇವೆ. ಬರುವ ದಿನಗಳಲ್ಲಿ ಸರಕಾರ ಸೂಚಿಸುವಂತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತೇವೆ.’ – ಕರಿಯಪ್ಪ ಚೆನ್ನೂರ್, ಪ್ರಥಮ ದರ್ಜೆ ಗುತ್ತಾದಾರರು ಹಾಗೂ ಎನ್‍ಡಿ ವಡ್ಡರ್ ಕಂಪನಿಯ ಮಾಲೀಕರು.

