ಆನ್‍ಲೈನ್ ಪಾಠದ ನೆಪದಲ್ಲಿ ಖಾಸಗಿ ಶಾಲೆಗಳ ಸುಲಿಗೆ : ಕ್ರಮಕ್ಕೆ ಆಗ್ರಹ
ಲಿಂಗಸುಗೂರು : ತಾಲೂಕಿನಲ್ಲಿ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಲಕರಿಗೆ ಶುಲ್ಕ ಕಟ್ಟುವಂತೆ ಒತ್ತಡ ಹೇರುತ್ತಿರುವುದು ಹಾಗೂ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಮಕ್ಕಳಿಗೆ ಆನ್‍ಲೈನ್ ಪಾಠ ಮಾಡುತ್ತೇವೆ, ಆಂಡ್ರೈಡ್ ಮೊಬೈಲ್ ಖರೀದಿಸಿ, ಇಲ್ಲದಿದ್ದರೆ ಪರಿಣಾಮ ಎದುರಿಸಿ ಎಂದು ಬ್ಲಾಕ್‍ಮೇಲ್ ಮಾಡುತ್ತಾ ಸುಲಿಗೆ ಮಾಡುತ್ತಿರುವ ಕ್ರಮ ಖಂಡನೀಯವಾಗಿದೆ. ಕೂಡಲೇ ಪಾಲಕರ ಸುಲಿಗೆಗೆ ಮುಂದಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಗ್ರಹಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ಜಿಲ್ಲಾ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದ ಅವರು, ಕೋವಿಡ್ ಎರಡನೇ ಅಲೆಯ ಲಾಕ್‍ಡೌನ್‍ನಿಂದ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಬದುಕು ಸಾಗಿಸುವುದೇ ಕಷ್ಟಕರವಾಗಿದೆ. ದುಡಿಮೆ ಇಲ್ಲದೇ ಬಡ ಹಾಗೂ ಮಧ್ಯಮ ವರ್ಗದ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಹೆಚ್ಚಿನ ಪಾಲಕರು ಮಕ್ಕಳ ವಿದ್ಯಾಭ್ಯಾಸಕ್ಕೆಂದು ಕೂಡಿಟ್ಟ ಹಣವನ್ನೂ ಲಾಕ್‍ಡೌನ್ ಅವಧಿಯಲ್ಲಿ ಜೀವನ ನಿರ್ವಹಣೆಗೆ ಬಳಕೆ ಮಾಡಿಕೊಂಡಿದ್ದಾರೆ. ಯಾವುದೇ ಖಾಸಗಿ ಶಾಲೆಗಳು ಮಕ್ಕಳ ಶುಲ್ಕ ಕೇಳಬಾರದೆಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದರೂ ಲಿಂಗಸುಗೂರು ತಾಲೂಕಿನ ಬಹುತೇಕ ಖಾಸಗಿ ಶಾಲೆಗಳು ಪಾಲಕರಿಗೆ ದೂರವಾಣಿ ಕರೆ ಮಾಡುವ ಮೂಲಕ ಶುಲ್ಕವನ್ನು ಕೇಳುತ್ತಿದ್ದಾರೆ.
ಎಲ್‍ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಸರಿಯಾಗಿ ಫೋನ್ ಏನು ಎಂಬುದೂ ಗೊತ್ತಾಗುವುದಿಲ್ಲ. ಅಂಥದ್ದರಲ್ಲಿ 4-5 ವರ್ಷದ ಮಕ್ಕಳಿಗೆ ಆಡ್ರೈಂಡ್ ಸೆಟ್ ಕೊಡಿಸಿ. ಶಾಲೆಗೆ ಬಂದು ಫೀ ಕಟ್ಟಿ. ನಾವು ಆನ್‍ಲೈನ್ ಮೂಲಕ ಪಾಠ ಹೇಳುತ್ತೇವೆ ಎಂದು ಬಹುತೇಕ ಪಾಲಕರಿಗೆ ಶಾಲೆಯಿಂದ ದೂರವಾಣಿ ಕರೆಗಳು ಬರುತ್ತಿವೆ. ಶುಲ್ಕ ಭರಿಸಲು ನಮ್ಮಲ್ಲಿ ಹಣವಿಲ್ಲ ಎಂದರೆ, ಇದರ ಪರಿಣಾಮ ನೀವೇ ಎದುರಿಸಬೇಕಾಗುತ್ತದೆ. ಶುಲ್ಕ ಕಟ್ಟದೇ ಇದ್ದರೆ ಮಕ್ಕಳಿಗೆ ಶಾಲೆಯಲ್ಲಿ ದಾಖಲಿಸಿಕೊಳ್ಳುವುದಿಲ್ಲ ಎಂದು ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ.
ಎಲ್.ಕೆ.ಜಿ., ಯು.ಕೆ.ಜಿ. ಯಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳ ಪಾಲಕರಿಗೆ ಪ್ರತಿನಿತ್ಯ ಆನ್‍ಲೈನ್ ಕ್ಲಾಸ್ ನೆಪದಲ್ಲಿ ದೂರವಾಣಿ ಕರೆ ಮಾಡುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳು ಬೆದರಿಕೆ ಹಾಕುತ್ತಿವೆ. ಸರಕಾರಿ ಶಾಲೆಯ ಮಕ್ಕಳಿಗೆ ಯಾವುದೇ ಕರೆಗಳು ಬರುತ್ತಿಲ್ಲ. ಪರೀಕ್ಷೆಗೆ ಕೂಡದೇ ಇದ್ದರೂ ಮುಂದಿನ ತರಗತಿಗೆ ಉತ್ತೀರ್ಣ ಮಾಡಬೇಕೆನ್ನುವ ಶಿಕ್ಷಣ ಇಲಾಖೆಯ ನಿಯಮಗಳನ್ನು ಸರಕಾರಿ ಶಾಲೆಗಳಲ್ಲಿ ಪಾಲನೆ ಮಾಡಲಾಗುತ್ತಿದೆ. ಆದರೆ, ಖಾಸಗಿ ಶಾಲೆಗಳಲ್ಲಿ ಮಾತ್ರ ಫೀ ಕಟ್ಟುವಂತೆ ಬಡ ಪಾಲಕರಿಗೆ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ದುಂಬಾಲು ಬಿದ್ದಿರುವುದು ಖಂಡನೀಯ.
ಕೂಡಲೇ ಪರಿಶೀಲನೆ ಮಾಡಿ ತಾಲೂಕಿನ ಖಾಸಗಿ ಶಾಲೆಗಳು ಬಡ ಹಾಗೂ ಮಧ್ಯಮ ವರ್ಗದ ಪಾಲಕರಿಗೆ ಶುಲ್ಕ ಕಟ್ಟುವಂತೆ ಪೀಡಿಸುತ್ತಿರುವುದನ್ನು ತಡೆಯಬೇಕು. ಶಿಕ್ಷಣ ಇಲಾಖೆಯ ನಿಯಮ ಉಲ್ಲಂಘನೆ ಮಾಡುತ್ತಿರುವ ಖಾಸಗಿ ಶಾಲೆಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹದ ಮೂಲಕ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಕರವೇ ಅದ್ಯಕ್ಷ ಜಿಲಾನಿಪಾಷಾ, ಪ್ರದಾನ ಕಾರ್ಯದರ್ಶಿ ಶಿವರಾಜ ನಾಯಕ್, ನಗರ ಘಟಕ ಅದ್ಯಕ್ಷ ಹನುಮಂತ ನಾಯಕ, ಅಜೀಜ್‍ಪಾಷಾ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

