ರಾಯಚೂರು

ಲಿಂಗಸುಗೂರು : ಅಂಧರಿಗೆ ಧನ ಸಹಾಯ ಮಾಡಿದ ಹೃದಯವಂತ ಸಿಪಿಐ ಸಜ್ಜನ್..!

ಖಾಜಾಹುಸೇನ್
ಲಿಂಗಸುಗೂರು : ಲಾಕ್‍ಡೌನ್‍ನಲ್ಲಿ ಪೋಲಿಸರು ಸಾರ್ವಜನಿಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎನ್ನುವ ಆರೋಪಗಳೇ ಬಹುತೇಕವಾಗಿ ಕೇಳಿ ಬರುತ್ತಿದೆ. ಆದರೆ, ಇಲ್ಲೊಬ್ಬ ಹೆಸರಿಗೆ ತಕ್ಕಂತೆ ಸಜ್ಜನ ಅಧಿಕಾರಿ ಮಾನವೀಯತೆಯನ್ನು ಮೆರೆಯುವ ಮೂಲಕ ನಿರ್ಗತಿಕರ, ಬಡವರಿಗೆ ಕೈಲಾದಷ್ಟು ಸಹಾಯ-ಸಹಕಾರ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗಳು ವ್ಯಕ್ತವಾಗುತ್ತಿವೆ.

ಪಟ್ಟಣದ ಬಸ್ಟಾಂಡ್ ವೃತ್ತದಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಅಂಧ ವ್ಯಕ್ತಿಗಳನ್ನು ತಡೆದು ವಿಚಾರಿಸಲಾಗಿ, ಅವರು ಪುಟ್ಟರಾಜ ಗವಾಯಿಗಳ ಶಿಷ್ಯರೆಂದು ತಿಳಿದು ಅವರಿಗೆ ಕೈ ಮುಗಿದು ಆರ್ಥಿಕ ನೆರವು ನೀಡಿ, ಅವರ ಕೆಲಸಕ್ಕೆ ಅನುಕೂಲ ಮಾಡಿಕೊಟ್ಟಿದ್ದಲೇ ಕಾರಿನಲ್ಲಿ ಮನೆಗೆ ಕಳುಹಿಸಿ ಕೊಟ್ಟರು. ಮೂಲಕ ಸಿಪಿಐ ಮಹಾಂತೇಶ ಸಜ್ಜನ್ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ.

ಜನಾನುರಾಗಿ ಅಧಿಕಾರಿ ಎಂದು ಮೆಚ್ಚುಗೆ ಪಡೆದಿರುವ ಸಿಪಿಐ ಸಜ್ಜನ್ ಮಾತೃ ಹೃದಯದ ವ್ಯಕ್ತಿಯಾಗಿದ್ದಾರೆ. ಜೊತೆಗಿರುವ ಸಿಬ್ಬಂಧಿಗಳ ನೆಚ್ಚಿನ ಅಧಿಕಾರಿಯಾಗಿರುವ ಇವರು, ಬಡವರು, ಅಸಹಾಯಕರು, ದುರ್ಬಲರು, ವೃದ್ಧರನ್ನು ಕಂಡರೆ ಮಮ್ಮಲ ಮರುಗುತ್ತಾರೆ. ಇತ್ತೀಚೆಗೆ ಹಟ್ಟಿ ಪಟ್ಟಣದಲ್ಲಿ ವೃದ್ದೆಯೋರ್ವಳು ದಾರಿಯಲ್ಲಿ ಕೂತಿದ್ದನ್ನು ಕಂಡು ಆಕೆಯ ಯೋಗಕ್ಷೇಮ ವಿಚಾರಿಸಿ ಆರ್ಥಿಕ ಸಹಾಯ ಮಾಡಿದ್ದಲ್ಲದೇ ತಿಂಗಳ ರೇಷನ್ ಕೊಡಿಸಿ ಮಾನವೀಯತೆ ಮೆರೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಖಾಕಿ ದರ್ಪದ ಒಳಗೆ ಮಾನವೀಯ ಹೃದಯ ಇರುವ ಇಂಥಹ ಅಧಿಕಾರಿಗಳು ಸಿಗುವುದು ವಿರಳ. ಕಾನೂನು ಚೌಕಟ್ಟಿನಲ್ಲಿ ಕಟ್ಟುನಿಟ್ಟಾಗಿ ಕಾನೂನು ಪಾಲನೆ ಮಾಡುವ ಜೊತೆಗೆ ಸಹಾಯ ಬೇಡಿ ಬಂದ ಅಥವಾ ಅಸಹಾಯಕ ಸ್ಥಿತಿಯಲ್ಲಿರುವವರ ಬಗ್ಗೆ ಮರುಕ ವ್ಯಕ್ತಪಡಿಸಿ ಸಹಾಯ ಮಾಡುವ ಸಿಪಿಐ ಸಜ್ಜನ್ ಕಾರ್ಯಕ್ಕೊಂದು ಸಲಾಂ..

Leave a Reply

Your email address will not be published. Required fields are marked *

error: Content is protected !!