ರಾಯಚೂರು

ಕೊಟ್ಯಂತರ ರೂಪಾಯಿ ಸರಕಾರದ ಆದಾಯ ನಷ್ಟಕ್ಕೆ ಹೊಣೆಯಾರು..? ಲಿಂಗಸುಗೂರು ಪುರಸಭೆ ಕರ್ಮಕಾಂಡ : ಗುಬ್ಬಿ ಮೇಲೆ ಭ್ರಹ್ಮಾಸ್ತ್ರ ಪ್ರಯೋಗವೇ..?

ಲಿಂಗಸುಗೂರು : ಲಿಂಗಸುಗೂರು ಪುರಸಭೆಯ ಆಡಳಿತಾಧಿಕಾರಿಗಳ ಅವಧಿಯಲ್ಲಿ ಎನ್.ಎ.ಲೇಔಟ್, ಅಕ್ರಮ ಖಾತೆ ಮತ್ತು ಆರ್ಥಿಕ ನಷ್ಟ ಉಂಟು ಮಾಡಿದ ದ್ವಿದಸ ಶಿವಲಿಂಗ ಮೇಗಳಮನಿಯವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಉಪ ವಿಭಾಗಾಧಿಕಾರಿಗಳು ಪತ್ರ ಬರೆದಿದ್ದು, ಪರಿಣಾಮ ಜಿಲ್ಲಾಧಿಕಾರಿಗಳು ಅಮಾನತ್ತು ಮಾಡಿ ಆದೇಶ ಹೊರಡಿಸಿರುವುದು ಸರಿಯಷ್ಟೇ. ಆದರೆ, ಸರಕಾರಿ ಕಚೇರಿಯಲ್ಲಿ ಮುಖ್ಯಅಧಿಕಾರಿಯ ಗಮನಕ್ಕೆ ಬಾರದೇ ಇಷ್ಟೆಲ್ಲಾ ಭ್ರಷ್ಟಾಚಾರ ನಡೆದು ಹೋಯಿತೇ..? ತಾವು ಮಾಡಿದ ತಪ್ಪನ್ನು ಸಿಬ್ಬಂಧಿಯ ಮೇಲೆ ಹಾಕುವ ಮೂಲಕ ಗುಬ್ಬಿಯ ಮೇಲೆ ಭ್ರಹ್ಮಾಸ್ತ್ರ ಪ್ರಯೋಗವಾಯಿತೇ..? ಪುರಸಭೆಗೆ ಆಗಿದೆ ಎಂದು ಹೇಳಲಾಗುತ್ತಿರುವ ಕೋಟ್ಯಾಂತರ ರೂಪಾಯಿ ನಷ್ಟಕ್ಕೆ ಹೊಣೆ ಯಾರು..? ಎನ್ನುವ ಮಾತುಗಳೀಗ ಸಾರ್ವಜನಿಕರಲ್ಲಿ ಕೇಳಿ ಬರುತ್ತಿವೆ.


ಸಧ್ಯಕ್ಕೆ ಅಮಾನತ್ತಾಗಿರುವ ಶಿವಲಿಂಗ ಮೇಗಳಮನಿ ಹಲವು ವರ್ಷಗಳಿಂದ ಲಿಂಗಸುಗೂರು ಪುರಸಭೆಯಲ್ಲಿಯೇ ನೌಕರಿ ಮಾಡುತ್ತಿದ್ದರು. ಸ್ಥಳೀಯರೆನ್ನುವ ಕಾರಣಕ್ಕೆ ಅವರ ಮೇಲೆ ಕೆಲವರಿಗೆ ಪ್ರೀತಿ, ಕೆಲವರಿಗೆ ಕೋಪತಾಪ ಎಲ್ಲವೂ ಮೇಳೈಸಿದ್ದವು. ಎಲ್ಲರನ್ನೂ ಸರಿದೂಗಿಸಿಕೊಂಡು ಕೆಲಸ ಮಾಡುತ್ತಿದ್ದ ಶಿವಲಿಂಗ, ಹಿಂದಿನ ಮುಖ್ಯಾಧಿಕಾರಿ ಮುತ್ತಪ್ಪನವರ ಪರಮಾಪ್ತರಾಗಿದ್ದರು. ಒಂದು ಹಂತದಲ್ಲಿ ಇವರು ಹೇಳಿದ್ದೇ ವೇದವಾಕ್ಯ ಎನ್ನುವಷ್ಟರ ಮಟ್ಟಿಗೆ ಪುರಸಭೆಯಲ್ಲಿ ಕಾರುಬಾರು ನಡೆಯುತ್ತಿತ್ತು. ಆದರೆ, ಇವರ ವಿರುದ್ಧ ಸಲ್ಲಿಕೆಯಾಗಿರುವ ಅಷ್ಟೂ ದೂರುಗಳು, ಆರೋಪಗಳು ಎಷ್ಟರ ಮಟ್ಟಿಗೆ ಸತ್ಯಕ್ಕೆ ಹತ್ತಿರವಾಗಿವೆಯೋ ತನಿಖೆಯ ಬಳಿಕವೇ ಬೆಳಕಿಗೆ ಬರಬೇಕಿದೆ. ಒಂದಂತೂ ಸತ್ಯ, ಮೇಲಧಿಕಾರಿಯ ಮೇಲೆ ಯಾವುದೇ ಕ್ರಮಕ್ಕೆ ಮುಂದಾಗದೇ ಸಾಮಾನ್ಯ ಗುಮಾಸ್ತನ ಮೇಲೆ ಶಿಸ್ತುಕ್ರಮ ಕೈಗೊಂಡಿರುವುದು ಹಲವರ ಹುಬ್ಬೇರಿಸುವಂತೆ ಮಾಡಿದೆ.


ಕಚೇರಿಯಲ್ಲಿನ ಕಡತಗಳನ್ನು ಸಿದ್ಧಪಡಿಸಿ ಮೇಲಧಿಕಾರಿಗಳಿಗೆ ಫೈನಲ್ ಮಾಡುವುದು ಸಿಬ್ಬಂಧಿ ಅಥವಾ ಗುಮಾಸ್ತನ ಕರ್ತವ್ಯ. ಅದೇ ರೀತಿಯಾಗಿ ಶಿವಲಿಂಗ ಅವರು ತಮ್ಮ ಕರ್ತವ್ಯವನ್ನು ಮಾಡಿದ್ದಾರೆ. ಆದರೆ, ಅಂತಿಮ ಹಂತದಲ್ಲಿ ಎಲ್ಲವನ್ನೂ ಪರಿಶೀಲನೆ ಮಾಡಿ ಸಹಿಗೆ ಮುಂದಾಗಬೇಕಾದ ಅಧಿಕಾರಿಯ ನಿರ್ಲಕ್ಷ್ಯತನವನ್ನೂ ಇಲ್ಲಿ ಪರಿಗಣಿಸಬೇಕಾದ ಅಂಶವಾಗಿದೆ. ಮೇಲಧಿಕಾರಿಗಳ ಸಲುಗೆಯಿಂದ ಕೆಳ ಹಂತದಲ್ಲಿರುವ ಸಿಬ್ಬಂಧಿಗಳು ಕೆಲವೊಂದು ಸಲ ಭ್ರಷ್ಟಾಚಾರದಲ್ಲಿ ತೊಡಗುವುದೂ ಉಂಟು. ಆದರೆ, ಇದಕ್ಕೆ ಕಡಿವಾಣ ಹಾಕಬೇಕಿರುವ ಜವಾಬ್ದಾರಿ ಮೇಲಧಿಕಾರಿಯದ್ದಾಗಿರುತ್ತದೆ.


ಮುತ್ತಪ್ಪನವರು ಮುಖ್ಯಾಧಿಕಾರಿಯಾಗಿದ್ದಾಗ ಲಿಂಗಸುಗೂರು ಪುರಸಭೆಯಲ್ಲಿ ಸಾರ್ವಜನಿಕರ ಕೆಲಸಗಳು ಅಡೆತಡೆಗಳಿಲ್ಲದೇ ಸಾಂಗವಾಗಿ ನಡೆಯುತ್ತಿದ್ದವು ಎನ್ನುವುದು ಮತ್ತು ವಿಜಯಲಕ್ಷ್ಮಿಯವರು ಮುಖ್ಯಾಧಿಕಾರಿಯಾಗಿ ಬಂದ ಬಳಿಕ ಕೆಲಸಗಳು ನೆನೆಗುದಿಗೆ ಬೀಳುತ್ತಿದ್ದವು ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಯಾವ ಅಧಿಕಾರಿ ಭ್ರಷ್ಟಾಚಾರ ಮಾಡಿದ್ದಾರೆ, ಯಾರು ಕಾನೂನು ಪ್ರಕಾರ ಕೆಲಸ ಮಾಡಿದ್ದಾರೆನ್ನುವುದು ತನಿಖೆಯಿಂದಲೇ ಬಯಲಾಗಬೇಕಿದೆ.


‘ಹಲವು ವರ್ಷಗಳಿಂದ ಲಿಂಗಸುಗೂರು ಪುರಸಭೆಯಲ್ಲಿ ನಡೆದ ಭ್ರಷ್ಟಾಚಾರದ ತನಿಖೆಯಾಗುವ ಮೂಲಕ ಜಿಲ್ಲಾಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮೇಲಧಿಕಾರಿಗಳನ್ನು ಬಿಟ್ಟು ಗುಮಾಸ್ತನನ್ನು ಅಮಾನತ್ತು ಮಾಡುವ ಕ್ರಮ ಖಂಡನೀಯ. ಹಿಂದಿನ ಮುಖ್ಯಾಧಿಕಾರಿ ಮುತ್ತಪ್ಪ ಹಾಗೂ ಅಮಾನತ್ತುಗೊಂಡ ಮುಖ್ಯಾಧಿಕಾರಿ ವಿಜಯಲಕ್ಷ್ಮಿಯವರು ಸಹಿ ಮಾಡಿದ ಕಡತಗಳು, ಲೇಔಟ್‍ಗಳಿಗೆ ಪರವಾನಿಗೆ ಕೊಟ್ಟ ಕಡತಗಳು, ಡೀಸೆಲ್ ಬಿಲ್ ಸೇರಿ ಇತರೆ ವ್ಯವಹಾರಗಳ ಬಗ್ಗೆ ಕೂಲಂಕುಶವಾಗಿ ತನಿಖೆ ಮಾಡಬೇಕು. ಗುಮಾಸ್ತನ ಅಮಾನತ್ತು ಆದೇಶವನ್ನು ಮತ್ತೊಮ್ಮೆ ಪರಿಶೀಲನೆ ಮಾಡಬೇಕು. ಗುಬ್ಬಿ ಮೇಲೆ ಭ್ರಹ್ಮಾಸ್ತ್ರ ಬಿಡುವ ಪರಿ ಪ್ರತಿಭಟನೆಗೆ ಮುಂದಾಗುವಂತೆ ಮಾಡಿದೆ. ಕೂಡಲೇ ಜಿಲ್ಲಾಧಿಕಾರಿಗಳು ಪರಿಶೀಲನೆಗೆ ಮುಂದಾಗಬೇಕು.’ – ಶಿವಪುತ್ರ ಗಾಣದಾಳ, ಕರುನಾಡ ವಿಜಯಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ.

Leave a Reply

Your email address will not be published. Required fields are marked *

error: Content is protected !!