ಯೋಗ ಕರೋ, ನಿರೋಗ ರಹೋ : ಯೋಗಗುರು ಬಾಬಾ ಮಾಸಿಲಾ ದೊರೆ ಅಂದಿನ ವೆಸನಿ, ಇಂದು ಯೋಗ ಗುರು..!
ವರದಿ : ಖಾಜಾಹುಸೇನ್
ಲಿಂಗಸುಗೂರು : ಒಂದು ಕಾಲದಲ್ಲಿ ಮಧ್ಯ ವೆಸನಿಯಾಗಿದ್ದ ಯುವಕ. ಈತನನ್ನು ಕಂಡವರು ಇನ್ನೇನು ಈತ ಕೆಲಸಕ್ಕೆ ಬಾರದಾದ ಎಂದು ಮಾತನಾಡಿಕೊಳ್ಳುತ್ತಿದ್ದರು. ಆಗ ಅಚಾನಕ್ಕಾಗಿ ಆ ಯುವಕ ತಿಂಗಳುಗಟ್ಟಲೇ ಊರಿಂದ ಕಾಣೆಯಾಗಿ ಒಂದು ದಿನ ಸ್ವಸ್ಥಾನಕ್ಕೆ ಮರಳುತ್ತಾನೆ. ಆಗ ಆತನನ್ನು ಕಂಡವರೆಲ್ಲಾ ಈತನೇ ಆ ವ್ಯಸನಿ ಎನ್ನುವಷ್ಟರ ಮಟ್ಟಿಗೆ ಆತನಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಕ್ರಮೇಣ ಆರೋಗ್ಯದ ಕಾಳಜಿಯನ್ನು ಸಮಾಜದಲ್ಲಿ ಭಿತ್ತರಿಸುತ್ತಾ, ಜನರಿಗೆ ಯೋಗದ ಪಾಠ ಹೇಳಿಕೊಡುತ್ತಾ ಆ ಯುವಕ ಯೋಗಗುರುವಾಗಿ ತಾಲೂಕಿನಲ್ಲಿ ಚಿರಪರಿಚಿತನಾಗುತ್ತಾನೆ.
ಅರೆ, ಇದೇನು ಕಥೆ ಹೇಳುತ್ತೀದ್ದೀರಿ ಎಂದುಕೊಂಡಿರಾ..? ಇದು ಖಂಡಿತಾ ಕಥೆಯಲ್ಲ. ಬದಲಿಗೆ ನಿಜ ಜೀವನದಲ್ಲಿ ನಡೆದ ಸತ್ಯ ಘಟನೆ. ಜನರಿಗೆ ಬೇಡವಾಗಿದ್ದ ಆ ಯುವಕ ಮತ್ಯಾರೂ ಅಲ್ಲ. ಆತನೇ ಅಂದಿನಾ ಮಾಸಿಲಾ ದೊರೈ. ಇಂದಿನ ಯೋಗಗುರು ಬಾಬಾ ಮಾಸಿಲಾ ದೊರೈ..!
ಸುಮಾರು 20 ವರ್ಷಗಳ ಹಿಂದೆ ಯಾರಿಗೂ ಬೇಡವಗಿದ್ದ ವ್ಯಕ್ತಿ ಈಗ ಎಲ್ಲರಿಗೂ ಆಧ್ಯಾತ್ಮಿಕತೆಯನ್ನು ಬೋಧನೆ ಮಾಡುತ್ತಾ, ಯೋಗಾಭ್ಯಾಸ ಮಾಡಿಸುತ್ತಾ ಸದೃಢ ಆರೋಗ್ಯದ ಗುಟ್ಟನ್ನು ಹೇಳಿಕೊಡುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಕಾಲಕ್ರಮೇಣ ಏನೆಲ್ಲಾ ಬದಲಾವಣೆಗಳು ಜರುಗುತ್ತವೆ ಎನ್ನುವುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ.
ಪ್ರತಿನಿತ್ಯ ಯೋಗ ಕರೋ, ಸದಾ ನಿರೋಗ ರಹೋ ಎನ್ನುವ ಮಾತನ್ನು ಯೋಗಗುರು ಬಾಬಾ ಮಾಸಿಲಾ ಯಾವತ್ತೂ ತಮ್ಮ ಸಹಚರರಿಗೆ ಹೇಳುತ್ತಿರುತ್ತಾರೆ. ಪ್ರತಿದಿನ ಬೆಳಗಿನ ಜಾವ ನಾಲ್ಕು ಗಂಟೆಯಿಂದ ಯೋಗಗುರುಗಳ ಆರೋಗ್ಯದ ಪಾಠ ಶುರುವಾಗುತ್ತದೆ. ಮೊದಲಿಗೆ ಜಾಗಿಂಗ್, ನಂತರ ಆಸನಗಳನ್ನು ಮಾಡಿಸುವ ಯೋಗಗುರುಗಳು ಬಳಿಕ ಪ್ರಾಣಾಯಾಮದ ಮೂಲಕ ಆರೋಗ್ಯ ಮತ್ತು ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವ ಪರಿಯನ್ನು ವಿವರಿಸುತ್ತಾರೆ. ಹಿಮಾಲಯಕ್ಕೆ ತೆರಳಿ ಯೋಗಾಭ್ಯಾಸ ಮಾಡಿ, ಯೋಗದಲ್ಲಿ ಪರಿಣಿತಿಯನ್ನು ಪಡೆದುಕೊಂಡು ಬಂದಿರುವ ಇವರಿಗೆ ಯೋಗವೆಂದರೆ ಪಂಚಪ್ರಾಣ.
ಇಂದಿನ ಯುವಶಕ್ತಿ ದುಶ್ಚಟಗಳಿಗೆ ಬಲಿಯಾಗಿ ಆರೋಗ್ಯದ ಮೇಲೆ ಕಾಳಜಿ ಇಲ್ಲದೇ, ವಿನಾಶದತ್ತ ಸಾಗುತ್ತಿದ್ದಾರೆ. ಯಾರ ಮನೆಯಲ್ಲಿ ನೋಡಿದರೂ ಮೊದಲಿಗೆ ಗುಳಿಗೆ, ಟಾಣಿಕ್, ಆಸ್ಪತ್ರೆ ಚೀಟಿಗಳೇ ಕಣ್ಣಿಗೆ ರಾಚುತ್ತವೆ. ಯಾರ ಬಳಿಯೂ ಆರೋಗ್ಯವನ್ನು ಕಾಪಾಡಿಕೊಳ್ಳುವ ಪುರುಸೊತ್ತು ಇಲ್ಲ. ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಆರೋಗ್ಯಕ್ಕೆ ತೊಂದರೆಯಾದಾಗ ಮಾತ್ರ ಯೋಗದ ಕಡೆಗೆ ಜನ ಒಲವು ತೋರುವ ಬದಲು, ದಿನನಿತ್ಯ ಪ್ರಾತಃಕಾಲದಲ್ಲಿ ಒಂದೆರಡು ಗಂಟೆ ಆರೋಗ್ಯಕ್ಕಾಗಿ ಮೀಸಲಿಟ್ಟರೆ, ಧೀರ್ಘಾಯುಶಿಗಳಾಗಿ ಜೀವಿಸಬಹುದಾಗಿದೆ ಎಂದು ಯೋಗಗುರು ಬಾಬಾ ಮಾಸಿಲಾ ಹೇಳುತ್ತಾರೆ.
ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಬಾಬಾ ಮಾಸಿಲಾ ದೊರೈ, ಪಟ್ಟಣದ ಡಿವೈಎಸ್‍ಪಿ ಬಂಗಲೆ ಬಳಿಯ ಮೈದಾನದಲ್ಲಿ ಪ್ರತಿದಿನವೂ ಉಚಿತವಾಗಿ ಸಾರ್ವಜನಿಕರಿಗೆ ಯೋಗದ ಪಾಠ ಹೇಳಿ ಕೊಡುತ್ತಿದ್ದಾರೆ. ವಿಶ್ವ ಯೋಗ ದಿನಾಚರಣೆ ನಿಮಿತ್ಯ ಬಾಬಾ ಅವರು ಪ್ರತಿಯೊಬ್ಬ ವ್ಯಕ್ತಿಗೂ ಯೋಗ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಂಡು ಆಸ್ಪತ್ರೆಯಿಂದ ದೂರ ಇರುವಂತೆ ಕಿವಿಮಾತು ಹೇಳುತ್ತಾರೆ.
ಇಂದು ಯೋಗ ದಿನಾಚರಣೆ. ಇಂದಿನಿಂದ ಯುವಪೀಳಿಗೆ ದುವ್ರ್ಯಸನಗಳತ್ತ ವಾಲದೇ, ಆರೋಗ್ಯವನ್ನು ಸದೃಢವಾಗಿ ಕಾಪಾಡಿಕೊಳ್ಳುವ ನಿಟ್ಟಿನತ್ತ ಮುಂದಾಗಬೇಕಿದೆ. ಯೋಗ ದಿನಾಚರಣೆಯಂದು ಮಾತ್ರ ಠೀಕುಠಾಕಾಗಿ ಯೋಗಾಭ್ಯಾಸ ಮಾಡದೇ ಇದೊಂದು ಕಾಯಕದಂತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವ ಕಳಕಳಿ ಬಾಬಾ ಮಾಸಿಲಾ ಅವರದ್ದಾಗಿದೆ.

