ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಮುಫ್ತಿ ಯುನೂಸ್‍ಖಾಸ್ಮಿ ಕರೆ
ಲಿಂಗಸುಗೂರು : ಕೊರೊನಾ ಮಹಾಮಾರಿಯನ್ನು ಮೆಟ್ಟಿನಿಲ್ಲಲು ಮನುಷ್ಯನ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಕೋವಿಡ್ ಲಸಿಕೆಯನ್ನು ಎಲ್ಲರೂ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕೆಂದು ಮುಫ್ತಿ ಸೈಯದ್ ಯೂನೂಸ್‍ಖಾಸ್ಮಿ ಕರೆ ನೀಡಿದರು.
ಸ್ಥಳೀಯ ಸರಕಾರಿ ಆಸ್ಪತ್ರೆಯ ಕೋವಿಡ್ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆದ ಅವರು, ಸಾರ್ವಜನಿಕರ ಆರೋಗ್ಯದ ಹಿತಾಸಕ್ತಿ ಕಾಪಾಡಲು ಕೇಂದ್ರ ಸರಕಾರ ಉಚಿತವಾಗಿ ಲಸಿಕೆ ಹಾಕುವ ನಿರ್ಧಾರ ಪ್ರಕಟಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ.
ದೇಶವ್ಯಾಪಿ ಕೊವಿಡ್ ಸೊಂಕಿನ ಅಟ್ಟಹಾಸದಿಂದ ಲಕ್ಷಾಂತರ ಜನರು ಬಲಿಯಾಗಿರುವುದು ದುರಂತ. ಇನ್ನು ಮುಂದೆ ಯಾವುದೇ ಪ್ರಾಣಹಾನಿ ಆಗದಂತೆ ಅಲ್ಲಾಹನ ಅನುಗ್ರಹ ನಮ್ಮೆಲ್ಲರ ಮೇಲಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಾ, ದೇಹದಲ್ಲಿನ ರೋಗನಿರೋಧಕ ಶಕ್ತಿ ವೃದ್ಧಿಸಲು ಕಡ್ಡಾಯವಾಗಿ ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳುವಂತೆ ಮನವಿ ಮಾಡಿದರು.

