ಹೊನ್ನಹಳ್ಳಿ ಗ್ರಾ.ಪಂ. ಪಿಡಿಓ ಅಮಾನತ್ತಿಗೆ ಒತ್ತಾಯ
ಲಿಂಗಸುಗೂರು : ತಾಲೂಕಿನ ಹೊನ್ನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಗುರುಸಿದ್ದಪ್ಪನವರು ಡಿಸೆಂಬರ್ 2018ರಿಂದ ಇಲ್ಲಿಯವರೆಗೆ ಸರಕಾರದಿಂದ ಬಂದ 14-15ನೇ ಹಣಕಾಸು ಯೋಜನೆಯ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಕರ್ತವ್ಯದಲ್ಲಿ ಲೋಪದೋಷ ಕಂಡು ಬಂದಿದ್ದು, ಬಿಲ್ ಕಲೆಕ್ಟರ್ ಹುದ್ದೆಗೆ ಅನಧಿಕೃತವಾಗಿ ನೇಮಕಾತಿ ಮಾಡಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ಪಿಡಿಓ ಅವರನ್ನು ಅಮಾನತ್ತು ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಒತ್ತಾಯಿಸಿದರು.
ತಾ.ಪಂ. ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, ಪಿಡಿಓ ಅವರು ಗುತ್ತೇದಾರರ ಜೊತೆ ಶಾಮೀಲಾಗಿ ಕಾಮಗಾರಿಗಳನ್ನು ಅರೆಬರೆಯಾಗಿ ಕೆಲಸ ಮಾಡಿದ್ದು, ಒಬ್ಬರೇ ಗುತ್ತೇದಾರರಿಗೆ ಹಲವಾರು ಕಾಮಗಾರಿಗಳ ಅಗ್ರಿಮೆಂಟ್ ಮಾಡಿಕೊಟ್ಟು ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡು ಬರುತ್ತದೆ. ಪರ್ಸೆಂಟೇಜ್ ಆಸೆಗಾಗಿ ಸರಕಾರದ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.
ಸಂಘಟನೆ ತಾಲೂಕು ಅದ್ಯಕ್ಷ ಚಂದ್ರಪ್ಪ ಮಡಿವಾಳರ್, ಮೌನೇಶ ಹೊನ್ನಳ್ಳಿ, ಯಲ್ಲಾಲಿಂಗ ಕುಣೆಕೆಲ್ಲೂರು, ಅನಿಲಕುಮಾರ ಮುಧೋಳ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

