ಪ್ರವಾಹದ ಮುನ್ನೆಚ್ಚರಿಕೆಯಾಗಿ ಕೆರೆಯಲ್ಲಿ ಬೋಟ್ ಪ್ರಾಕ್ಟೀಸ್..!
ಲಿಂಗಸುಗೂರು : ಕೃಷ್ಣಾ ನದಿಯಲ್ಲಿ ಪ್ರವಾಹ ಬಂದಾಗ ಸಂತ್ರಸ್ಥರನ್ನು ಯಾವ ರೀತಿಯಗಿ ರಕ್ಷಣೆ ಮಾಡಬೇಕೆನ್ನುವ ಪ್ರಾಯೋಗಿಕ ಪರೀಕ್ಷೆಯನ್ನು ಬುಧವಾರ ಸ್ಥಳೀಯ ಕೆರೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂಧಿಗಳು ನಡೆಸಿದರು.
ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮ ತಾಲೂಕಿನ ಕೃಷ್ಣಾ ನದಿಯಲ್ಲಿ ಪ್ರತಿವರ್ಷವೂ ಪ್ರವಾಹ ಭೀತಿ ತಲೆದೋರುತ್ತದೆ. ನಡುಗಡ್ಡೆಯ ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಮುನ್ನೆಚ್ಚರಿಕೆ ನೀಡಲಾಗಿದ್ದರೂ, ಕೆಲವರು ನಡುಗಡ್ಡೆಗಳಲ್ಲಿಯೇ ಉಳಿದುಕೊಳ್ಳುತ್ತಾರೆ. ಪರಿಸ್ಥಿತಿ ವಿಕೋಪಕ್ಕೆ ತೆರಳಿದಾಗ ಅವರನ್ನು ರಕ್ಷಣೆ ಮಾಡುವುದು ಅನಿವಾರ್ಯವಾಗುತ್ತದೆ. ಈ ಸಂದರ್ಭದಲ್ಲಿ ಸಂತ್ರಸ್ಥರನ್ನು ಸುರಕ್ಷಿತವಾಗಿ ಕರೆ ತರಲು ನದಿಯಲ್ಲಿ ಬೋಟ್ ಮೂಲಕ ತೆರಳುತ್ತಾರೆ. ಇದಕ್ಕಾಗಿ ಪ್ರಾಯೋಗಿಕವಾಗಿ ಬುಧವಾರ ಸುರಿಯುತ್ತಿದ್ದ ಜಿಟಿಜಿಟಿ ಮಳೆಯಲ್ಲಿಯೇ ಅಗ್ನಿಶಾಮಕ ಸಿಬ್ಬಂಧಿಗಳು ಪ್ರಾಕ್ಟೀಸ್ ಮಾಡಿದರು.
ಸುಮಾರು 3-4 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾದ ಸಂದರ್ಭದಲ್ಲಿ ಕೃಷ್ಣೆಯು ರೌದ್ರಾವತಾರ ತಾಳುತ್ತಾಳೆ. ಅಂಥಹ ರಣಭೀಕರ ಪರಿಸ್ಥಿತಿಯಲ್ಲಿ ಬೋಟ್ ಮೂಲಕ ತೆರಳಿ ಸಂತ್ರಸ್ಥರನ್ನು ರಕ್ಷಣೆ ಮಾಡುವ ಸಾಹಸದ ಕಾರ್ಯ ಅಗ್ನಿಶಾಮಕ ಸಿಬ್ಬಂಧಿಗಳಿಗೆ ಸವಾಲಾಗಿ ಪರಿಣಮಿಸುತ್ತದೆ. ಈ ಪರಿಸ್ಥಿತಿ ಬಾರದಂತೆ ತಡೆಯಲು ತಾಲೂಕಾಡಳಿತ ಈಗಿನಿಂದಲೇ ಮುಂದಾಲೋಚನೆ ಮಾಡುವ ಜೊತೆಗೆ ನಡುಗಡ್ಡೆ ನಿವಾಸಿಗಳಿಗೆ ಮನವೊಲಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕೆನ್ನುವ ಒತ್ತಾಯಗಳು ಕೇಳಿ ಬರುತ್ತಿವೆ.

