ರಾಯಚೂರು

ಶಾಸಕರು, ಮಾಜಿ ಶಾಸಕರು, ಜೆಡಿಎಸ್ ಪರಾಜಿತ ಅಭ್ಯರ್ಥಿಗಳು ಮುಂದೆ ಬನ್ನಿ..! ಲಿಂಗಸುಗೂರು : ಕೋವಿಡ್ ಸಹಾಯ ಕೇಂದ್ರ ಸ್ಥಾಪನೆಗೆ ಆಲ್ಕೋಡ್ ಆಗ್ರಹ

ಲಿಂಗಸುಗೂರು : ಗ್ರಾಮೀಣ ಭಾಗದಲ್ಲಿ ಹೆಚ್ಚಾಗುತ್ತಿರುವ ಕೋವಿಡ್ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಸೊಂಕಿತರಿಗೆ ಕೋವಿಡ್ ಸಹಾಯ ಕೇಂದ್ರಗಳನ್ನು ಸ್ಥಾಪಿಸಲು ಹಾಲಿ ಶಾಸಕರು, ಮಾಜಿ ಶಾಸಕರು ಮತ್ತು ಪರಾಜಿತ ಜೆಡಿಎಸ್ ಅಭ್ಯರ್ಥಿ ಮುಂದೆ ಬರಬೇಕೆಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಹನುಮಂತಪ್ಪ ವೈ.ಆಲ್ಕೋಡ್ ಹೇಳಿದ್ದಾರೆ.


ಈ ಬಗ್ಗೆ ಪ್ರಕಟಣೆ ನೀಡಿದ ಅವರು, ಗ್ರಾಮೀಣ ಭಾಗದಲ್ಲಿ ಸೊಂಕು ಉಲ್ಬಣಗೊಳ್ಳುತ್ತಿರುವ ಪರಿಣಾಮ ಜನತೆಯ ಆರೋಗ್ಯ ಹಿತದೃಷ್ಠಿಯಿಂದ ತಾಲೂಕಿನ ಎಲ್ಲಾ ಪಂಚಾಯತ್ ಮಟ್ಟದಲ್ಲಿ ಕೋವಿಡ್ ರೋಗಿಗಳಿಗೆ 50 ಹಾಸಿಗೆಗಳುಳ್ಳ ಟೀನ್ ಶೆಡ್ ನಿರ್ಮಾಣ ಮಾಡಿ ಬೆಡ್, ಆಕ್ಸಿಜನ್, ಔಷಧ ಸೇರಿ ಸಕಾಲಕ್ಕೆ ಚಿಕಿತ್ಸೆ ಸಿಗುವಂತೆ ಕ್ರಮ ಕೈಗೊಳ್ಳಲು ಪಕ್ಷಾತೀತವಾಗಿ ಜನಪ್ರತಿನಿಧಿಗಳು ಮುಂದೆ ಬರಬೇಕು.

ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಕೊವಿಡ್ ಎರಡನೇ ಅಲೆಯ ಹೊಡೆತಕ್ಕೆ ಜನ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎರಡು ಬಾರಿ ಶಾಸಕರಾಗಿ ಪ್ರಸ್ತುತ ಹಟ್ಟಿ ಚಿನ್ನದಗಣಿಯ ಅದ್ಯಕ್ಷರಾಗಿರುವ ಮಾನಪ್ಪ ವಜ್ಜಲ್‍ರು, ಹಾಲಿ ಶಾಸಕ ಡಿ.ಎಸ್.ಹೂಲಗೇರಿಯವರು ಹಾಗೂ ಜೆಡಿಎಸ್‍ನಿಂದ ಪರಾಜಿತಗೊಂಡ ಸಿದ್ದು ಬಂಡಿಯವರು ಕೂಡಲೇ ಜನರ ನೋವುಗಳಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದ್ದಾರೆ.


ಆರ್ಥಿಕವಾಗಿ ಸ್ಥಿತಿವಂತರಾಗಿರುವ ಮೂವರು ಮುಖಂಡರುಗಳು ಜನರ ಕಷ್ಟಕಾಲಕ್ಕೆ ಸಹಾಯ ಹಸ್ತ ಚಾಚಬೇಕು. ಕೇವಲ ಚುನಾವಣೆ ಸಂದರ್ಭದಲ್ಲಿ ಕೋಟಿಗಟ್ಟಲೇ ಹಣವನ್ನು ಸುರಿಯುವ ಬದಲು, ಇಂಥಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಜನರ ಬವಣೆಗೆ ನೆರವಾಗಬೇಕು. ಜನ ಯಾವತ್ತೂ ಸಹಾಯ ಮಾಡಿದವರನ್ನು ಮರೆಯುವುದಿಲ್ಲ. ಮುಂದೆ ಇದರ ಫಲ ನಿಮಗೆ ಸಿಕ್ಕೇ ಸಿಗುತ್ತದೆ ಎಂದು ಆಲ್ಕೋಡ್ ಹೇಳಿದ್ದಾರೆ.


ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ, ದುಡಿಮೆ ಇಲ್ಲದೇ ಜನರು ಜೀವನ ನಡೆಸುವುದು ಕಷ್ಟವಾಗಿದೆ. ಕೂಡಲೇ ಉದ್ಯೋಗ ಖಾತ್ರಿ ಯೋಜನೆಯನ್ನು ಆರಂಭಿಸುವ ಮೂಲಕ ಕೂಲಿಕಾರ್ಮಿಕರಿಗೆ ಕೆಲಸ ನೀಡುವ ಜೊತೆಗೆ ಬದುಕಿಗೆ ಆಸರೆಯಾಗಬೇಕೆಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ಆಲ್ಕೋಡ್ ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!