ಲಿಂಗಸುಗೂರು : ಪತ್ರಕರ್ತರಿಗೆ ಕೋವಿಡ್ ಲಸಿಕೆ
ಲಿಂಗಸುಗೂರು : ಸ್ಥಳೀಯ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿ ಪತ್ರಿಕಾ ಭವನದಲ್ಲಿ ಪತ್ರಕರ್ತರಿಗೆ ಆರೋಗ್ಯ ಇಲಾಖೆಯಿಂದ ಕೋವಿಡ್ ಲಸಿಕೆ ಹಾಕಲಾಯಿತು.
ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಪ್ರಯತ್ನದ ಫಲವಾಗಿ ಮುಖ್ಯಮಂತ್ರಿಗಳು, ಪತ್ರಕರ್ತರು ಮತ್ತು ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂಧಿಗಳನ್ನು ಕೋವಿಡ್ ಫ್ರಂಟ್‍ಲೈನ್ ವಾರಿಯರ್ಸ್ ಎಂದು ಪರಿಗಣಿಸಿ ಆಧ್ಯತೆ ಮೇರೆಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ ಪರಿಣಾಮ ಮಂಗಳವಾರ ಸಂಘದ ತಾಲೂಕು ಅದ್ಯಕ್ಷ ಶಿವರಾಜ ಕೆಂಭಾವಿ ನೇತೃತ್ವದಲ್ಲಿ ಪತ್ರಕರ್ತರು ಲಸಿಕೆ ಹಾಕಿಸಿಕೊಂಡರು.
ಸಮಾಜದ ಆಗುಹೋಗುಗಳಲ್ಲಿ ಮುಂಚೂಣೆಯಲ್ಲಿ ನಿಂತು ಕೆಲಸ ಮಾಡುವ ಪತ್ರಕರ್ತರು ಆರೋಗ್ಯದಿಂದ ಇರಬೇಕೆಂಬ ಅಭಿಲಾಷೆಯಿಂದ ಮುಖ್ಯಮಂತ್ರಿಗಳು ಫ್ರಂಟ್‍ಲೈನ್ ಕೊವಿಡ್ ವಾರಿಯರ್ಸ್ ಎಂದು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಇದರ ಶ್ರೇಯಸ್ಸು ನಮ್ಮ ರಾಜ್ಯಾಧ್ಯಕ್ಷರಿಗೆ ಸಲ್ಲುತ್ತದೆ. ಪತ್ರಕರ್ತರು ಹಾಗೂ ಅವರ ಕುಟುಂಬದ ಕಾಳಜಿ ಹೊಂದಿರುವ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರಿಗೆ ಅಭಿನಂದನೆಗಳು ಎಂದು ಹೇಳುತ್ತಾ, ಹಲವು ಪತ್ರಕರ್ತರಲ್ಲಿ ಕೆಲವರು ಕಾರಣಾಂತರಗಳಿಂದ ಲಸಿಕಾ ಕಾರ್ಯಕ್ರಮಕ್ಕೆ ಬಾರದೇ ಇದ್ದುದರಿಂದ ಮತ್ತೊಂದು ದಿನಾಂಕವನ್ನು ನಿಗದಿಪಡಿಸಿ ಉಳಿದವರಿಗೆ ವ್ಯಾಕ್ಸಿನ್ ಹಾಕಿಸಲಾಗುವುದೆಂದು ಅದ್ಯಕ್ಷ ಶಿವರಾಜ ಕೆಂಭಾವಿ ಮಾತನಾಡಿದರು.
ಮನುಷ್ಯನ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಜೊತೆಗೆ ವೈರಸ್‍ನ ವಿರುದ್ಧ ಹೋರಾಡುವ ಶಕ್ತಿಯನ್ನು ಬೆಳೆಸುವ ವ್ಯಾಕ್ಸಿನ್‍ಅನ್ನು ಪ್ರತಿಯೊಬ್ಬರೂ ಹಾಕಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸದಾ ಜನಸೇವೆಗೆ ಬದ್ಧವಾಗಿದೆ ಎಂದು ಸರಕಾರಿ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ್ ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಪಾಟೀಲ್ ಸೇರಿ ಆರೋಗ್ಯ ಇಲಾಖೆ ಸಿಬ್ಬಂಧಿಗಳು ಹಾಗೂ ಪತ್ರಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

