ನೆಲಕಚ್ಚಿದ ಟೊಮೆಟೊ ಬೆಲೆಯಿಂದ ಲಾಭ ಮಾಡಿಕೊಳ್ಳುತ್ತಿರುವ ವ್ಯಾಪಾರಿಗಳು ಅನ್ನದಾತನಿಗೆ ಬರೆ : ಜನಸಾಮಾನ್ಯರಿಗೆ ಹೊರೆ
ವರದಿ : ಖಾಜಾಹುಸೇನ್
ಲಿಂಗಸುಗೂರು : ದೇಶದ ಬೆನ್ನೆಲುಬು ಅನ್ನದಾತ ಎನ್ನುವುದು ಕೇವಲ ಬಾಯಿ ಮಾತಿಗಷ್ಟೇ ಸೀಮಿತವಾಗಿದೆ. ತಿಂಗಳು-ವರ್ಷಗಟ್ಟಲೇ ಜಮೀನಿನಲ್ಲಿ ಹಗಲಿರುಳು ದುಡಿದರೂ ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥತಿ ಸಧ್ಯ ಅನ್ನದಾತನದ್ದಾಗಿದೆ. ಸಾವಿರಾರು ರೂಪಾಯಿ ಸಾಲ ಸೋಲ ಮಾಡಿದ ರೈತರು ಬೆಳೆದ ಬೆಳೆಗೆ ಹಾಕಿದ ಬಂಡವಾಳವೂ ಬಾರದೇ ಇರುವಂಥಹ ಸಂಧಿಗ್ಧ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಕನಿಷ್ಠ ಬೆಲೆಗೆ ಬೆಳೆಯನ್ನು ಮಾರಿಕೊಂಡು ರೈತ ಹೊಟ್ಟೆಯ ಮೇಲೆ ಬರೆ ಎಳೆದುಕೊಳ್ಳುವಂಥಹ ಪರಿಸ್ಥಿತಿಗೆ ಬಂದಿದ್ದರೆ, ಜನಸಾಮಾನ್ಯರಿಗೆ ಇದು ಹೊರೆಯಾಗಿ ಪರಿಣಮಿಸಿದೆ. ಆದರೆ, ಕಡಿಮೆ ಬೆಲೆಗೆ ಖರೀದಿಸುವ ಚಿಲ್ಲರೆ ವ್ಯಾಪಾರಿಗಳು ಮಾತ್ರ ಹೆಚ್ಚಿನ ಲಾಭ ಪಡೆದುಕೊಳ್ಳುತ್ತಾರೆ.
ಸ್ಥಳೀಯ ಎಪಿಎಂಸಿ ಪ್ರಾಂಗಣದಲ್ಲಿರುವ ಸಗಟು ಮಾರುಕಟ್ಟೆಯಲ್ಲಿ ಗುರುವಾರ ಗ್ರಾಮೀಣ ಪ್ರದೇಶದಿಂದ ಟೊಮೆಟೊ ಮಾರಲು ಬಂದಿದ್ದ ರೈತಾಪಿ ವರ್ಗಕ್ಕೆ ಒಂದು ಪುಟ್ಟಿಗೆ 40-80 ರೂಪಾಯಿ ಸಿಕ್ಕಿತಷ್ಟೆ. ಉತ್ತಮ ಗುಣಮಟ್ಟದ ಟೊಮೆಟೊಗೂ ಕನಿಷ್ಠ ಬೆಲೆಯನ್ನು ನಿಗದಿ ಪಡಿಸಿ ವ್ಯಾಪಾರಿಗಳು ಖರೀದಿಸುವ ದೃಶ್ಯ ಕಂಡುಬಂತು. ನೂರಾರು ಪುಟ್ಟಿಗಳನ್ನು ಹೊತ್ತು ಮಾರುಕಟ್ಟೆಗೆ ಬಂದಿದ್ದ ರೈತರು ಮಾತ್ರ ಬಂದ ದರಕ್ಕೆ ಕೊಟ್ಟು ನಿರಾಶರಾಗುವುದೂ ಕಂಡು ಬಂತು.
ಕನಿಷ್ಠ ಬೆಲೆಗೆ ಕೊಂಡುಕೊಳ್ಳುವ ವ್ಯಾಪಾರಿಗಳು ಹೊರಗಡೆ ಮಾರುಕಟ್ಟೆಯಲ್ಲಿನ ತಮ್ಮ ಅಂಗಡಿಗಳಲ್ಲಿ 15-20 ರೂಪಾಯಿ ವರೆಗೂ ಪ್ರತಿ ಕೆ.ಜಿ.ಯಂತೆ ಮಾರಾಟ ಮಾಡುವ ಮೂಲಕ ಮೂರರಿಂದ ನಾಲ್ಕು ಪಟ್ಟು ಲಾಭ ಪಡೆಯುತ್ತಿದ್ದಾರೆ. ಬೇಸಿಗೆಯ ದಿನವಾಗಿದ್ದರೂ ಈ ಬಾರಿ ನೀರು ಸಾಕಷ್ಟು ಇರುವುದರಿಂದ ಗ್ರಾಮೀಣ ಭಾಗದಲ್ಲಿ ಹೆಚ್ಚೆಚ್ಚು ರೈತರು ಟೊಮೆಟೊಗೆ ಹೆಚ್ಚಿನ ಬೆಲೆ ಸಿಗುತ್ತದೆಂದು ಎಥೇಚ್ಛವಾಗಿ ಬೆಳೆದಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ಪೂರೈಕೆ ಹೆಚ್ಚಾದ ಪರಿಣಾಮ ಅಟೋಮೆಟಿಕ್ ಆಗಿ ದರಕುಸಿತವಾಗಿದೆ.
ಟೊಮೆಟೊ ಹಾಗೂ ಈರುಳ್ಳಿ ಬೆಳೆಗಳ ಬೆಲೆ ಕನಿಷ್ಠ ಮಟ್ಟಕ್ಕಿಳಿದಿದ್ದು ಈ ಬೆಳೆಗಳನ್ನು ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ವ್ಯಾಪಾರಿಗಳು ಇದೇ ಅವಕಾಶ ಎಂದುಕೊಂಡು ಹೆಚ್ಚಿನ ದರಕ್ಕೆ ಮಾರಾಟ ಮಾಡಿಕೊಳ್ಳುವ ಮೂಲಕ ಲಾಭ ಪಡೆದುಕೊಳ್ಳುತ್ತಿದ್ದಾರೆನ್ನುವ ಮಾತುಗಳು ಕೇಳಿ ಬರುತ್ತಿವೆ. ಸಾಲದ ಸುಳಿಯಲ್ಲಿ ಸಿಲುಕುವ ಅನ್ನದಾತನ ನೆರವಿಗೆ ಕೂಡಲೇ ಸರಕಾರ ಧಾವಿಸಬೇಕು. ಲಾಕ್‍ಡೌನ್ ಸಂಕಷ್ಟದ ಕಾಲದಲ್ಲಿ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎನ್ನುವ ಒತ್ತಾಯಗಳು ಕೇಳಿಬರುತ್ತಿವೆ.

