ಪ್ರಮುಖ ರಸ್ತೆಗಳೆಲ್ಲಾ ಲಾಕ್ : ದಂಡಂ ದಶಗುಣಂ
ಲಿಂಗಸುಗೂರು : ಲಾಕ್‍ಡೌನ್‍ನ ಮೊದಲ ದಿನದಂದು ವಿನಾಕಾರಣ ಹೊರಬಂದ ಸಾರ್ವಜನಿಕರಿಗೆ ಪೋಲಿಸರು ಲಾಠಿ ರುಚಿ ತೋರಿದ್ದು ರಾಜ್ಯವ್ಯಾಪಿ ಜಾಲತಾಣಗಳಲ್ಲಿ ಖಂಡನೆಗೆ ಒಳಗಾಯಿತು. ಪರಿಣಾಮ ಸರಕಾರ ಅಗತ್ಯ ಇರುವವರು ದ್ವಿಚಕ್ರ ವಾಹನ ತರಬಹುದು ಎಂದು ಆದೇಶ ಮಾಡಿತು. ಇದರಿಂದ ಮಂಗಳವಾರ ದಿನ ಪಟ್ಟಣದ ಬಹುತೇಕ ಕಡೆಗಳಲ್ಲಿ ಜನರು ಬೈಕ್‍ಗಳಲ್ಲಿ ರಸ್ತೆಗಳಿದರು. ಆದರೆ, ಜನರ ನಾಡಿಮಿಡಿತ ಅರಿತ ಪೋಲಿಸರು ಮಾತ್ರ ಪ್ರಮುಖ ರಸ್ತೆಗಳಿಗೆ ಬಾರಿಕೇಡ್‍ಗಳನ್ನು ಹಾಕಿ ಕೇವಲ ಒಂದೇ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ಬಿಟ್ಟಿದ್ದರು. ಈ ರಸ್ತೆಯಲ್ಲಿ ಬರುವ ವಾಹನಗಳಿಗೆ ದಂಡ ಹಾಕುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
ಪಟ್ಟಣದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯ ಒಂದು ಬದಿಯ ರಸ್ತೆಯನ್ನು ಬಂದ್ ಮಾಡುವ ಮೂಲಕ ಒಂದೇ ಭಾಗದ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಓಣಿ-ಗಲ್ಲಿಗಳಿಂದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಬಹುತೇಕ ಎಲ್ಲಾ ರಸ್ತೆಗಳಿಗೂ ಬ್ಯಾರಿಕೇಡ್, ಟಿಂಬರ್‍ಗಳನ್ನು ಅಡ್ಡಲಾಗಿ ಹಾಕಿ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ. ಆಸ್ಪತ್ರೆ, ಔಷಧ ಅಂಗಡಿ, ತರಕಾರಿ ಹೀಗೆ ಅಗತ್ಯ ಇರುವ ಕಡೆ ಹೋಗಲು ಮಾತ್ರ ದಾರಿ ಬಿಡಲಾಗಿದೆ.
ಮನೆಯಿಂದ ಬರುವ ಜನ ಬಸ್ಟಾಂಡ್ ವೃತ್ತಕ್ಕೆ ಬರುವಂತೆ ವ್ಯೂಹವನ್ನು ರಚಿಸಿಕೊಂಡು ವೃತ್ತದಲ್ಲಿ ರಶೀದಿ ಪುಸ್ತಕದೊಂದಿಗೆ ಪೋಲಿಸರು ಬಂದೋಬಸ್ತಿನಲ್ಲಿದ್ದಾರೆ. ಈ ರಸ್ತೆ ಮೂಲಕ ಸಕಾರಣವಿಲ್ಲದೇ ಬರುವವರಿಗೆ ದಂಡ ಹಾಕಿಯೇ ಕಳುಹಿಸುತ್ತಿದ್ದಾರೆ. ಪಿಎಸ್‍ಐ ಪ್ರಕಾಶರೆಡ್ಡಿ ಡಂಬಳ್ ನೇತೃತ್ವದಲ್ಲಿ ಸಿಬ್ಬಂಧಿಗಳು ಬಸ್ಟಾಂಡ್ ವೃತ್ತದಲ್ಲಿ ತೈನಾತಾಗಿದ್ದಾರೆ.

