ಕಟ್ಟೆ ಮೇಲೆಯೇ ಪಾಠ ಬೋಧನೆ.. ಪ್ರತಿನಿಧಿಗಳಿಗಿಲ್ಲ ಕಾಳಜಿ.. 250 ಮಕ್ಕಳು..! ಕಗ್ಗಂಟಾಗಿರುವ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ಕಟ್ಟಡ..!
ಖಾಜಾಹುಸೇನ್
ಲಿಂಗಸುಗೂರು : ಶಿಕ್ಷಣದಿಂದ ಯಾರೊಬ್ಬರೂ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಸರಕಾರ ಕಡ್ಡಾಯ ಶಿಕ್ಷಣದ ಜೊತೆಗೆ ಹತ್ತಾರು ಯೋಜನೆಗಳನ್ನು ಜಾರಿಗೆ ತರುತ್ತಿರುವುದು ಹಾಗೂ ವಿವಿಧ ಸಮುದಾಯಕ್ಕೆಂದೇ ವಿಶೇಷವಾದ ಶಿಕ್ಷಣ ಕೇಂದ್ರಗಳನ್ನು ಆರಂಭಿಸಿರುವುದು ಸರಿಯಷ್ಟೆ. ಆದರೆ, ಸರಕಾರದಿಂದ ಬರುವ ಸವಲತ್ತುಗಳನ್ನು ಪಡೆದುಕೊಂಡು ತಾಲೂಕು ಕೇಂದ್ರದಲ್ಲಿ ಸುಸಜ್ಜಿತವಾದ ಕಟ್ಟಡ ಕಟ್ಟುವಲ್ಲಿ ಮಾತ್ರ ಜನಪ್ರತಿನಿಧಿಗಳು ವಿಫಲರಾಗುತ್ತಿದ್ದಾರೆ ಎನ್ನುವುದಕ್ಕೆ ಪಟ್ಟಣದ ಸರಕಾರಿ ತೋಟದಲ್ಲಿರುವ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯೇ ಸಾಕ್ಷಿಯಾಗಿದೆ.
2017-18ನೇ ಶೈಕ್ಷಣಿಕ ಸಾಲಿನಿಂದ ಆರಂಭಗೊಂಡಿರುವ ಈ ಶಾಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸುಮಾರು 250 ಮಕ್ಕಳು 6 ರಿಂದ 10ನೇ ತರಗತಿಯವರೆಗೆ ದಾಖಲೆ ಪಡೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸುಪರ್ದಿಯಲ್ಲಿರುವ ಈ ಶಾಲೆಯಲ್ಲಿ 6-10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಜೊತೆಗೆ ಕಲಿಕೆಗೆ ಬೇಕಾಗುವ ಪರಿಕರಗಳನ್ನು ಉಚಿತವಾಗಿಯೇ ಪೂರೈಕೆ ಮಾಡಲಾಗುತ್ತಿದೆ.
ಸರಕಾರಿ ತೋಟದ ಆವರಣದಲ್ಲಿ ಸರಕಾರಿ ಉರ್ದು ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪಟ್ಟಣ ಪ್ರೌಢ ಶಾಲೆಗಳಿವೆ. ಈ ಎಲ್ಲಾ ಶಾಲೆಗಳಿಗೂ ತಮ್ಮದೇ ಆದ ಸ್ವಂತ ಕಟ್ಟಡಗಳಿವೆ. ಆದರೆ, ಕಟ್ಟಡದ ಕೊರತೆಯಿಂದ ಮೌಲಾನಾ ಆಜಾದ್ ಶಾಲೆಯ ಮಕ್ಕಳು ಮಾತ್ರ ಅನ್ಯ ಮಾರ್ಗವಿಲ್ಲದೇ ಬೇರೆ ಬೇರೆ ಕಟ್ಟಡಗಳಲ್ಲಿ ಕೂತು ಪಾಠ ಆಲಿಸುವ ದುಸ್ಥಿತಿ ಇದೆ.
ಕಳೆದ ಐದು ವರ್ಷಗಳಿಂದ ಆರಂಭವಾಗಿರುವ ಈ ಶಾಲೆಗೆ ಕೇವಲ ಒಂದು ಕೊಠಡಿ ನೀಡಿ ಕೈ ತೊಳೆದುಕೊಂಡಿರುವ ಶಿಕ್ಷಣ ಇಲಾಖೆ ಶಾಲೆಯಲ್ಲಿನ ವಿದ್ಯಾರ್ಥಿಗಳ ಕಲಿಕೆಗೆ ಆಸರೆ ಆಗದಿರುವುದು ಪಾಲಕರ ಅಸಮಧಾನಕ್ಕೆ ಕಾರಣವಾಗಿದೆ. ಬೇರೆ ಬೇರೆ ಶಾಲೆಗಲ್ಲಿ ಎರಡ್ಮೂರು ಕೊಠಡಿಗಳನ್ನು ನೀಡಲಾಗಿದ್ದರೂ, ಅವುಗಳು 6-10ನೇ ತರಗತಿಗೆ ಸಾಲುತ್ತಿಲ್ಲ ಎನ್ನುವುದು ಇಲ್ಲಿನ ಶಿಕ್ಷಕರ ಮಾತಾಗಿದೆ.
ಕಳೆದ ಎರಡು ವರ್ಷಗಳಿಂದ ಕೋವಿಡ್ ಪರಿಣಾಮ ಶಾಲೆಗಳು ಬಂದಾಗಿದ್ದವು. ಈಗೀಗ ಹಂತಹಂತವಾಗಿ ತರಗತಿಗಳು ಆರಂಭವಾಗುತ್ತಿರುವದರಿಂದ ಈ ಶಾಲೆಗೆ ಕೊಠಡಿಗಳ ಕೊರತೆ ಎದುರಾಗಿದೆ. ಕೊಠಡಿ ಕೊರತೆ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದಾಗ್ಯೂ ಯಾವುದೇ ಕ್ರಮಕ್ಕೆ ಮುಂದಾಗದೇ ಅಸಹಾಯಕತೆ ತೋರ್ಪಡಿಸುತ್ತಾರೆನ್ನುವುದು ಗುಟ್ಟಾದ ವಿಷಯವೇನಲ್ಲ.
ಜನಪ್ರೀಯತೆಯನ್ನು ಗಳಿಸಿಕೊಂಡು ಅಬಿವೃದ್ಧಿ ಕೆಲಸಗಳನ್ನು ಬಿಡುವಿಲ್ಲದಂತೆ ಮಾಡುತ್ತಿರುವ ಕ್ಷೇತ್ರದ ಶಾಸಕರೂ ಇತ್ತ ಚಿತ್ತ ಹರಿಸುತ್ತಿಲ್ಲ ಎನ್ನುವ ಕೊರಗು ಮೌಲಾನಾ ಆಜಾದ್ ಶಾಲೆಯ ವಿದ್ಯಾರ್ಥಿಗಳದ್ದಾಗಿದೆ. ಈಗಾಗಲೇ ಇಲಾಖೆಯಿಂದ ಕಟ್ಟಡದ ನೀಲನಕ್ಷೆಯನ್ನೂ ಸಿದ್ಧಪಡಿಸಿಕೊಳ್ಳಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಅನುದಾನವೂ ಇರುವುದಾಗಿ ತಿಳಿದುಬಂದಿದೆ. ನಿವೇಶನದ ಕೊರತೆಯಿಂದ ಕಾಮಗಾರಿ ಆಗುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಕೂಡಲೇ ಶಾಸಕರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯುಂಟು ಕಗ್ಗಂಟಾಗಿರುವ ಮಾಡಲು ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ಕಟ್ಟಡಕ್ಕೆ ಸರಕಾರಿ ತೋಟದ ಕ್ಯಾಂಪಸ್‍ನಲ್ಲಿ ನಿವೇಶನ ಮಂಜೂರು ಮಾಡಿಸಿ, ಶೀಘ್ರ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಬೇಕು ಎನ್ನುವ ಒತ್ತಾಯಗಳು ಪಾಲಕರಲ್ಲಿವೆ. ಎಷ್ಟರ ಮಟ್ಟಿಗೆ ಪಾಲಕರ ಹಾಗೂ ವಿದ್ಯಾರ್ಥಿಗಳ ಆಶಾಭಾವನೆ ಈಡೇರುವುದೋ ಕಾಲವೇ ಉತ್ತರಿಸಬೇಕಿದೆ.
‘ಲಿಂಗಸುಗೂರು ಪಟ್ಟಣದಲ್ಲಿ ಈಗಾಗಲೇ ಮೌಲಾನಾ ಆಜಾದ್ ಶಾಲೆ ಆರಂಭವಾಗಿ ಐದು ವರ್ಷಗಳು ಕಳೆದಿವೆ. ಈ ಬಾರಿ 10ನೇ ತರಗತಿಯ ಪ್ರಥಮ ಬ್ಯಾಚ್ ಅಬ್ಯಾಸ ಮಾಡುತ್ತಿದೆ. ಐದು ವರ್ಷ ಕಳೆದರೂ ಶಾಲೆಗೆ ಸುಸಜ್ಜಿತವಾದ ಕಟ್ಟಡದ ಕೊರತೆ ಇದೆ. ಬೇರೆ ಬೇರೆ ಶಾಲೆಗಳಿಂದ ಕೊಠಡಿಗಳನ್ನು ಪಡೆದು ಆಜಾದ್ ಶಾಲೆಯ ಶಿಕ್ಷಕರು ಪಾಠ ಬೋಧನೆ ಮಾಡುತ್ತಿದ್ದಾರೆ. ಇದರಿಂದ ಶಿಕ್ಷಣದಲ್ಲಿ ತಾರತಮ್ಯವಾಗುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ.
ಕೂಡಲೇ ಶಾಸಕರು ಹಾಗೂ ಶಿಕ್ಷಣ ಇಲಾಖೆಯ ಮೇಲಧಿಕಾರಿಗಳು ಈ ಬಗ್ಗೆ ಕ್ರಮಕ್ಕೆ ಮುಂದಾಗಿ ಈ ಶಾಲೆಗೆ ಸ್ವಂತ ಕಟ್ಟಡ ಮಾಡಿಕೊಡಬೇಕು. ಇಲ್ಲಿನ ಶಿಕ್ಷಣಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಆಡಳಿತದ ವಿರುದ್ಧ ಪ್ರತಿಭಟನೆಗೆ ಮುಂದಾಗಬೇಕಾಗುವುದು.’ –ಜಿಲಾನಿಪಾಷಾ, ಕರವೇ ಅದ್ಯಕ್ಷ.

