ಸ್ವಂತ ಖರ್ಚಿನಲ್ಲಿ ಚೌಕಿ ನಿರ್ಮಾಣಕ್ಕೆ ಮುಂದಾದ ಸಿಪಿಐ ಸಜ್ಜನ್ ಕಾರ್ಯಕ್ಕೆ ಪ್ರಶಂಸೆ ಲಿಂಗಸುಗೂರು : ಸಂಚಾರ ನಿಯಂತ್ರಣಕ್ಕೆ ಪೋಲೀಸ್‍ಚೌಕಿ ನಿರ್ಮಾಣ
ವರದಿ: ಖಾಜಾಹುಸೇನ್
ಲಿಂಗಸುಗೂರು : ತಾಲೂಕಿನಲ್ಲಿ ಸಿಂಗಂ ಎಂದೇ ಪರಿಚಿತರಾಗಿರುವ ಜನಪರ ಕಾಳಜಿಯುಳ್ಳ ಅಧಿಕಾರಿ ಸಿಪಿಐ ಮಹಾಂತೇಶ ಸಜ್ಜನ್ ಅವರು ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ತಡೆಗಟ್ಟಲು ಸ್ವಂತ ಖರ್ಚಿನಲ್ಲಿ ಪೋಲಿಸ್‍ಚೌಕಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜನಿಕರಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ಬಸ್ಟಾಂಡ್ ವೃತ್ತದ ಮೂಲಕ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಪ್ರತಿನಿತ್ಯ ವಾಹನಗಳ ಅಡ್ಡಾದಿಡ್ಡಿ ಓಡಾಟದಿಂದ ಸಂಚಾರ ದಟ್ಟಣೆ ಉಂಟಾಗುತ್ತಲೇ ಇರುತ್ತದೆ. ಈ ಬಗ್ಗೆ ಪತ್ರಿಕೆಗಳು ಸಾಕಷ್ಟು ಬಾರಿ ಗಮನ ಸೆಳೆದಿದ್ದವು. ಆದರೂ ಆಡಳಿತ ಮಾತ್ರ ಕ್ರಮಕ್ಕೆ ಮುಂದಾಗಿದ್ದಿಲ್ಲ. ಕಳೆದ ಸುಮಾರು ಮೂರ್ನಾಲ್ಕು ತಿಂಗಳುಗಳ ಹಿಂದೆ ಲಿಂಗಸುಗೂರು ವೃತ್ತ ನಿರೀಕ್ಷರಾಗಿ ಆಗಮಿಸಿರುವ ತಾಲೂಕಿನವರೇ ಆದ ಮಹಾಂತೇಶ ಸಜ್ಜನ್ ಇಲ್ಲಿನ ಸಮಸ್ಯೆಯ ಬಗ್ಗೆ ಗಮನ ಹರಿಸಿದ್ದಾರೆ. ನಿತ್ಯ ಸಂಚಾರ ದಟ್ಟಣೆಯಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಗೆ ಇತಿಶ್ರೀ ಹಾಡಲು ಮುಂದಾಗಿದ್ದಾರೆ.
ಕೇವಲ ಕಟೌಟ್, ಬ್ಯಾನರ್‍ಗಳಿಗೆ ಸೀಮಿತವಾಗಿದ್ದ ಬಸ್ಟಾಂಡ್ ವೃತ್ತದಲ್ಲೀಗ ಸಂಚಾರ ದಟ್ಟಣೆ ನಿಯಂತ್ರಿಸಲು ಪೋಲಿಸರು ನಿಲ್ಲುತ್ತಾರೆ. ನಿಯಮಾನುಸಾರ ವಾಹನಗಳ ಓಡಾಟಕ್ಕೆ ಇದು ಅನುಕೂಲವಾಗುತ್ತದೆ. ಅಲ್ಲದೇ, ಟ್ರಾಫಿಕ್ ಸಮಸ್ಯೆಯಿಂದ ಇದು ಮುಕ್ತಿ ಪಡೆದಂತಾಗುತ್ತದೆ. ಜನಸ್ನೇಹಿ ಪೋಲಿಸರೆಂದು ಕೇವಲ ಬಾಯಿ ಮಾತಿಗೆ ಸೀಮಿತವಾಗದೇ, ತಮ್ಮ ಕರ್ತವ್ಯದ ಜೊತೆಗೆ ಜನಪರ ಕಾಳಜಿಯನ್ನು ಮೆರೆಯುವ ಇಂಥಹ ಅಧಿಕಾರಿಗಳ ಕಾರ್ಯಸೇವೆ ಸಾರ್ಥಕವಾಗುತ್ತದೆ ಎನ್ನುವ ಅಭಿಪ್ರಾಯ ಜನರಲ್ಲಿದೆ.
ಪೋಲಿಸರ ಜನಸ್ನೇಹಿ ಕಾರ್ಯಕ್ಕೆ ಕರವೇ ಅದ್ಯಕ್ಷ ಜಿಲಾನಿಪಾಷಾ ಸೇರಿ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿಪಿಐ ಜೊತೆಗೆ ಪೇದೆಗಳಾದ ಈರಣ್ಣ ಮಳ್ಳಿ, ಶರಣರೆಡ್ಡಿ, ನಾಗಾರ್ಜುನ ಸೇರಿ ಇತರರು ಸಾಥ್ ನೀಡಿದ್ದಾರೆ.

