ರಾಯಚೂರು

ಎನ್.ಆರ್.ಬಿ.ಸಿ. ಕಾಲುವೆಗೆ ಎಪ್ರಿಲ್-20ರ ವರೆಗೆ ನೀರು ಹರಿಸದಿದ್ದರೆ ಜಿಲ್ಲಾದ್ಯಂತ ಹೋರಾಟ : ಗಾಣದಾಳ

ಲಿಂಗಸುಗೂರು : ನಾರಾಯಣಪುರ ಬಲದಂಡೆ ಕಾಲುವೆಗೆ 20ರವರೆಗೆ ನೀರು ಹರಿಸಬೇಕು. ಇಲ್ಲದಿದ್ದರೆ ರಾಯಚೂರು ಜಿಲ್ಲಾದ್ಯಂತ ಉಗ್ರವಾಗಿ ಪ್ರತಿಭಟನೆ ಮಾಡಲಾಗುವುದು ಎಂದು ಕರುನಾಡ ವಿಜಯ ಸೇನೆ ರಾಜ್ಯ ಕಾರ್ಯದರ್ಶಿ ಶಿವಪುತ್ರ ಗಾಣದಾಳ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಏಪ್ರಿಲ್ 20ರ ವರೆಗೆ ಬಲದಂಡೆ ಕಾಲುವೆಗೆ ನೀರು ಹರಿಸುವಂತೆ ಈ ಭಾಗದ ಸಾವಿರಾರು ರೈತರು ಹೋರಾಟ ಮಾಡುತ್ತಿದ್ದರೂ, ಸರಕಾರ ಮತ್ತು ನೀರಾವರಿ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗದೇ ಇರುವುದು ಖಂಡನೀಯ. ನೀರಾವರಿ ಸಲಹಾ ಸಮಿತಿಯ ತುರ್ತು ಸಭೆ ಕರೆದು ರೈತಾಪಿ ವರ್ಗದ ಸಹಾಯಕ್ಕೆ ಬರುವಲ್ಲಿ ಕೆ.ಬಿ.ಜೆ.ಎನ್.ಎಲ್. ವಿಫಲವಾಗಿರುವುದು ಸ್ಪಷ್ಟವಾಗುತ್ತದೆ.

ಹಗಲಿರುಳೆನ್ನದೆ ರೈತಾಪಿ ವರ್ಗ ಹೊಲಗದ್ದೆಗಳಲ್ಲಿ ದುಡಿದು, ಬೆಳೆ ಕೈಗೆ ಬರುವ ಸಂದರ್ಭದಲ್ಲಿ ನೀರು ಬಂದು ಮಾಡುವುದು ಯಾವ ನ್ಯಾಯ? ಪ್ರತಿ ಎಕರೆಗೆ 35 ರಿಂದ 45 ಸಾವಿರ ರೂಪಾಯಿ ಖರ್ಚು ಮಾಡಿಕೊಂಡು ಸಾಲದ ಜೀವನದಲ್ಲಿ ಪರಿತಪಿಸುತ್ತಿದ್ದಾನೆ. ರೈತನ ಬಗ್ಗೆ ಕಾಳಜಿ ಇಲ್ಲದ ನೀರಾವರಿ ಇಲಾಖೆ ಈ ಬಗ್ಗೆ ಚಕಾರ ಎತ್ತದೆ ಇರುವುದು ದುರದೃಷ್ಟಕರ. ಅಲ್ಲದೇ ಈ ಭಾಗದ ಸಂಸದರು ಶಾಸಕರುಗಳು ಸೇರಿ ಜನಪ್ರತಿನಿಧಿಗಳು ರೈತರ ನೆರವಿಗೆ ಬಾರದೆ ಇರುವುದು ಅವರ ಜನಪರ ಕಾಳಜಿಗೆ ಕೈಗನ್ನಡಿಯಾಗಿದೆ ಆರೋಪಿಸಿದರು.

ಶೇಂಗಾ, ಕಡಲೇ, ಮೆಣಸಿನಕಾಯಿ ಸೇರಿ ನಾನಾ ಬೆಳೆಗಳನ್ನು ಬೆಳೆದಿರುವ ಅಚ್ಚುಕಟ್ಟು ಪ್ರದೇಶದ ರೈತರು ನೀರಿನ ಅಭಾವವನ್ನು ಮನಗಂಡು ಆತಂಕ ಪರಿಸ್ಥಿತಿಯಲ್ಲಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರುವಂತಾಗಲು ರೈತರು ಬೆಳೆದ ಬೆಳೆಗೆ ಏಪ್ರಿಲ್ 20ರ ವರೆಗೆ ನೀರು ಕೊಡುವುದು ಸರಕಾರಕ್ಕೆ ಅನಿವಾರ್ಯವಾಗುತ್ತದೆ.

ಸರಕಾರ ಹಾಗೂ ಜನಪ್ರತಿನಿಧಿಗಳು ಉಪಚುನಾವಣೆಯಲ್ಲಿ ಬಿಜಿಯಾಗಿ ರೈತರ ಕಾಳಜಿಯನ್ನು ಮರೆತಿದ್ದಾರೆ. ಕೂಡಲೇ ನಾಲೆಗೆ ನೀರು ಹರಿಸುವ ಬಗ್ಗೆ ಮಂತ್ರಿಗಳು ಹಾಗೂ ನೀರಾವರಿ ಸಚಿವರು, ನೀರಾವರಿ ಸಲಹಾ ಸಮಿತಿಯ ತುರ್ತು ಸಭೆಯನ್ನು ಕರೆದು ಏಪ್ರಿಲ್ 20ರ ವರೆಗೆ ನೀರು ಬಿಡುವಂತೆ ಸೂಚನೆ ನೀಡಬೇಕು. ಇಲ್ಲವಾದಲ್ಲಿ ಈ ಭಾಗದ ರೈತರೊಂದಿಗೆ ಸೇರಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಗಾಣದಾಳ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!