ಕೋವಿಡ್ ಅಸಮರ್ಪಕ ಮಾಹಿತಿ : ಅಧಿಕಾರಿಗಳ ವಿರುದ್ಧ ಡಿಸಿಎಂ ಗರಂ
ಲಿಂಗಸುಗೂರು : ಸ್ಥಳೀಯ ಕೋವಿಡ್ ಕೇರ್ ಸೆಂಟರ್‍ಗೆ ಭೇಟಿ ನೀಡಿದ ಬಳಿಕ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ಕರೆದಿದ್ದ ಜಿಲ್ಲಾ ಉಸ್ತುವಾರಿ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯವರು ಕೋವಿಡ್ ಸೊಂಕಿತರ ಬಗ್ಗೆ ಅಸಮರ್ಪಕ ಮಾಹಿತಿ ನೀಡಿದ ತಹಸೀಲ್ದಾರ್ ಮೇಲೆ ಗರಂ ಆದ ಘಟನೆ ಸೋಮವಾರ ಜರುಗಿತು.
ತಾಲೂಕಿನಲ್ಲಿ ಎಷ್ಟು ಜನ ಸೊಂಕಿತರು, ಮನೆಯಲ್ಲಿ ಅವರ ಸ್ಥಿತಿಗತಿಗಳೇನು ಎನ್ನುವ ಬಗ್ಗೆ ಮಾಹಿತಿಯನ್ನು ಸಮರ್ಪಕವಾಗಿ ಕಲೆ ಹಾಕದೇ ಇರುವ ತಹಸೀಲ್ದಾರ್ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿದರ ಡಿಸಿಎಂ, ನಾವುಗಳೀಗ ಬಹಳ ಸಂಧಿಗ್ಧ ಪರಿಸ್ಥಿತಿಯಲ್ಲಿದ್ದೇವೆ ಎನ್ನುವುದನ್ನು ಅರಿತೊಕೊಂಡು ಕೆಲಸ ಮಾಡಬೇಕು. ಬಹು ಎಚ್ಚರಿಕೆಯಿಂದ ಇರಬೇಕು. ಯಾವುದೇ ಕಥೆ ಕಟ್ಟಬಾರದು. ಹಾಗೊಂದು ವೇಳೆ ನಿರ್ಲಕ್ಷ್ಯ ವಹಿಸಿದ ಬಗ್ಗೆ ಗಮನಕ್ಕೆ ಬಂದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಪಿಡಿಓಗಳು ಅತ್ಯಂತ ಜಾಗರೂಕರಾಗಿ ಕೆಲಸ ಮಾಡಬೇಕು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಸುರಕ್ಷಾ ಕ್ರಮಗಳ ಬಗ್ಗೆ ಮನವರಿಕೆ ಮಾಡಬೇಕು. ಗ್ರಾಮೀಣ ಪ್ರದೇಶದಿಂದ ಬರುವ ಸೊಂಕಿತರಿಗೆ ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ, ನವೋದಯ ಶಾಲೆ, ವಸತಿ ನಿಲಯಗಳು ಸೇರಿ ಸರಕಾರಿ ಕಟ್ಟಡಗಳನ್ನು ಬಳಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು. ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳಿ. ಪ್ರತಿಯೊಂದು ಕೇಂದ್ರಕ್ಕೂ ಎರಡು ಬಸ್‍ಗಳ ವ್ಯವಸ್ಥೆ ಮಾಡುವ ಮೂಲಕ ರೋಗಿಗಳಿಗೆ ತುರ್ತು ಆಕ್ಸಿಜನ್ ನೀಡಲು ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಬ್ಲಾಕ್ ಫಂಗಸ್ ರೋಗವೂ ಆರಂಭಿಕ ಹಂತದಲ್ಲಿಯೇ ಪ್ರಾಣಕ್ಕೆ ಕುತ್ತು ತರುವಂಥದ್ದಾಗಿದ್ದು, ಈ ಬಗ್ಗೆಯೂ ವೈದ್ಯರು ಹಾಗೂ ಅಧಿಕಾರಿಗಳು ಮುನ್ನೆಚ್ಚರಿಕೆಯಾಗಿ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ತಾಕೀತು ಮಾಡಿದರು.
ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಡಿ.ಎಸ್.ಹೂಲಗೇರಿ, ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್, ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ಆಸಿಫ್ ತನ್ವೀರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಸಹಾಯಕ ಆಯುಕ್ತ ರಾಜಶೇಖರ ಡಂಬಳ್, ಡಿವೈಎಸ್‍ಪಿ ಎಸ್.ಎಸ್.ಹುಲ್ಲೂರು, ತಹಸೀಲ್ದಾರ್ ಚಾಮರಾಜ ಪಾಟೀಲ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಪಾಟೀಲ್ ಸೇರಿ ಇತರರು ಇದ್ದರು.

