ಹಳೆಯ ಕಂಪ್ಯೂಟರ್‍ಗಳಿಂದ ಕೆಲಸ ನಿಧಾನ, ಆದಾಯ ಮಾತ್ರ ಕೋಟಿ-ಕೋಟಿ ಸರ್ವರ್ ಪ್ರಾಬ್ಲಮ್, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕೆಲಸ ಬಂದ್..!
ವರದಿ : ಖಾಜಾಹುಸೇನ್
ಲಿಂಗಸುಗೂರು : ಸರಕಾರದ ಖಜಾನೆ ತುಂಬಿಸುವ ಕಚೇರಿಗಳಲ್ಲಿ ಮುಂಚೂಣೆಯಲ್ಲಿರುವ ಸಬ್‍ರಿಜಿಸ್ಟ್ರಾರ್ (ಉಪನೋಂದಣಾಧಿಕಾರಿ) ಕಚೇರಿಯಲ್ಲಿ ಸೋಮವಾರ ಮತ್ತು ಮಂಗಳವಾರ ಸರ್ವರ್ ಪ್ರಾಬ್ಲಮ್‍ನಿಂದ ಕೆಲಸ ಕಾರ್ಯಗಳೆಲ್ಲಾ ಸ್ಥಗಿತಗೊಂಡಿದ್ದವು. ತಿಂಗಳಿಗೆ ಕೋಟಿಗಟ್ಟಲೇ ಆದಾಯ ಕೊಡುವ ಇಲಾಖೆ ಕಚೇರಿಯಲ್ಲಿ ದಶಕಗಳಷ್ಟು ಹಳೆಯ ಕಂಪ್ಯೂಟರ್‍ಗಳು ಇರುವುದರಿಂದ ಕೆಲಸ ಚುರುಕಾಗಿ ನಡೆಯುತ್ತಿಲ್ಲ. ಕಚೇರಿಯನ್ನು ಕೇವಲ ಆದಾಯಕ್ಕೆ ಮಾತ್ರ ಸೀಮಿತಗೊಳಿಸಿ, ಅದಕ್ಕೆ ಬೇಕಾದ ವ್ಯವಸ್ಥೆ ಮಾಡದೇ ಇರುವ ಸರಕಾರದ ಕ್ರಮದ ಬಗ್ಗೆ ಸಾರ್ವಜನಿಕರಲ್ಲಿ ಅಸಮಧಾನ ಮೂಡಿದೆ.
ನಿವೇಶನಗಳ ನೋಂದಣೆ, ಮನೆಗಳ ನೋಂದಣೆ, ಜಮೀನು ಮಾರಾಟ, ಪಾರ್ಟೆಶನ್ ದಾಖಲೆ, ಇಸಿ, ಒತ್ತಿ ರೆಜಿಸ್ಟ್ರೇಶನ್, ಜಂಟಿ ನೋಂದಣೆ ಸೇರಿ ಹತ್ತಾರು ಕೆಲಸಗಳಿಗೆ ನಿತ್ಯ ನೂರಾರು ಜನ ಈ ಕಚೇರಿಗೆ ಎಡತಾಕುತ್ತಾರೆ. ಆದರೆ, ನಿಧಾನಗತಿಯ ಕೆಲಸದಿಂದ ಪದೇ ಪದೇ ಕಚೇರಿಗೆ ಅಲೆಯುವ ಸನ್ನಿವೇಶಗಳು ಎದುರಾಗುತ್ತವೆ.
ಸ್ಥಳೀಯ ಉಪನೋಂದಣಾಧಿಕಾರಿ ಕಚೇರಿಯಲ್ಲಿರುವ ಸಿಸ್ಟಮ್‍ಗಳು ಹಳೆಯದಾಗಿದ್ದು ಕೆಲಸ ಮಾಡುವಲ್ಲಿ ಸಿಬ್ಬಂಧಿಗಳಿಗೆ ತೊಂದರೆಯಾಗುತ್ತಿದೆ. ಅಲ್ಲದೇ, ರಾಜ್ಯಾದ್ಯಂತ ಆನ್‍ಲೈನ್ ಮೂಲಕ ರೆಜಿಸ್ಟ್ರೇಶನ್ ಪ್ರಕ್ರಿಯೆ ನಡೆಯುವದರಿಂದ ಒಂದು ದಾಖಲೆ ಆಗಲು ಗಂಟೆಗಟ್ಟಲೇ ಸಮಯ ಬೇಕಾಗುತ್ತದೆ. ಪರಿಣಾಮ ಕಚೇರಿಗೆ ಬರುವ ಜನರಿಗೆ ತೀವ್ರ ತೊಂದರೆ ಆಗುತ್ತಿದೆ.
ಹೊಸತಾಗಿ ಗಣಕಯಂತ್ರಗಳನ್ನು ಖರೀದಿ ಮಾಡಲು ರಾಜ್ಯಮಟ್ಟದಲ್ಲಿ ಟೆಂಡರ್ ಕರೆಯಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆಯಾದರೂ, ತಿಂಗಳುಗಳಿಂದ ಇದೇ ರೀತಿ ಹೇಳಲಾಗುತ್ತಿದೆ. ಕ್ರಮ ಮಾತ್ರ ಆಗುತ್ತಿಲ್ಲ ಎನ್ನುವ ನೋವು ಖುದ್ದು ಸಿಬ್ಬಂಧಿಗಳೇ ವ್ಯಕ್ತಪಡಿಸುತ್ತಾರೆ.
ಈ ಕಚೇರಿಯಿಂದ ಪ್ರತಿನಿತ್ಯ ಲಕ್ಷಗಟ್ಟಲೇ ಆದಾಯ ಪಡೆಯುವ ಸರಕಾರ ರಾಜ್ಯಾದ್ಯಂತ ಕೂಡಲೇ ಕಚೇರಿಯಲ್ಲಿನ ತೊಂದರೆಗಳನ್ನು ನಿವಾರಿಸಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಬೇಕೆನ್ನುವ ಒತ್ತಾಯಗಳು ಕೇಳಿಬರುತ್ತಿವೆ. ಎಷ್ಟರ ಮಟ್ಟಿಗೆ ಸರಕಾರ ಉಪನೋಂದಣಾಧಿಕಾರಿ ಕಚೇರಿಯಿಂದ ಲಾಭ ಪಡೆದಷ್ಟು, ಅನುಕೂಲವನ್ನೂ ಕಲ್ಪಿಸಿಕೊಡಲು ಮುಂದಾಗುವುದೋ ಕಾದು ನೋಡಬೇಕಿದೆ.

