ಟ್ರಾಕ್ಟರ್ ಪಲ್ಟಿ : ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ ಸಿಪಿಐ
ಲಿಂಗಸುಗೂರು : ತಾಲೂಕಿನ ಯರಡೋಣ ಕ್ರಾಸ್‍ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರಾಕ್ಟರ್ ಪಲ್ಟಿಯಾದ ಪರಿಣಾಮ ವಾಹನದಲ್ಲಿದ್ದವರು ಗಾಯಗೊಂಡಿದ್ದರು. ಗಾಯಾಳುಗಳನ್ನು ತನ್ನ ವಾಹನದಲ್ಲೇ ಆಸ್ಪತ್ರೆಗೆ ಸೇರಿಸಿ ಮುಂದೆ ನಿಂತು ಚಿಕಿತ್ಸೆ ಕೊಡಿಸುವ ಮೂಲಕ ಸಿಪಿಐ ಮಹಾಂತೇಶ ಸಜ್ಜನ್ ಮಾನವೀಯತೆ ಮೆರೆದಿದ್ದಾರೆ.
ಇಟ್ಟಿಗೆ ಲೋಡ್ ತುಂಬಿಕೊಂಡು ಹೊರಟಿದ್ದ ಟ್ರಾಕ್ಟರ್ ಯರಡೋಣ ಕ್ರಾಸ್ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸೋಮವಾರ ಬೆಳಗ್ಗೆ ಪಲ್ಟಿಯಾಗಿದೆ. ವಾಹನದಲ್ಲಿದ್ದ ಕಾರ್ಮಿಕರು ಹಾಗೂ ಚಾಲಕರಿಗೆ ಗಾಯಗಳಾಗಿ ನರಳಾಡುತ್ತಿದ್ದರು, ಆಗ ಸ್ಥಳಕ್ಕೆ ಬಂದ ಸಿಪಿಐ ಕೂಡಲೇ ಕಾರ್ಯಪ್ರವೃತ್ತರಾಗಿ ಗಾಯಾಳುಗಳನ್ನು ತಮ್ಮ ವಾಹನದಲ್ಲಿ ಕೂಡಿಸಿಕೊಂಡು ಆಸ್ಪತ್ರೆಗೆ ಹೋಗಿ ಅವರಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಅಪಘಾತವಾದಾಗ ತಮಗೇಕೆ ಇದರ ಗೊಡವೆ ಎನ್ನುವ ಜನರ ಮಧ್ಯೆ ಅಧಿಕಾರಿಯೊಬ್ಬರು ಮಾನವೀಯತೆ ಮೆರೆದಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

