ರಾಯಚೂರು

ಚಿನ್ನಾಭರಣಗಳ ಮೇಲೆ ವಿಧಿಸಿರುವ ಹೆಚ್.ಯು.ಐ.ಡಿ. ಹಿಂಪಡೆಯಲು ಒತ್ತಾಯ

ಲಿಂಗಸುಗೂರು : ಚಿನ್ನಾಭರಣಗಳ ಮೇಲೆ ವಿಧಿಸಿರುವ ಹೆಚ್.ಯು.ಐ.ಡಿ. (ಹಾಲ್‍ಮಾರ್ಕ್ ಯೂನಿಕ್ ಐಡೆಂಟಿಫಿಕೇಶನ್ ನಂಬರ್) ಹಿಂಪಡೆಯುವಂತೆ ಚಿನ್ನಾಭರಣ ವ್ಯಾಪಾರಿಗಳು ಒತ್ತಾಯಿಸಿದರು.


ಸೋಮವಾರ ಮಧ್ಯಾಹ್ನದವರೆಗೆ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ಮಾಡಿದ ಅವರು, ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.


ಹೆಚ್.ಯು.ಐ.ಡಿ.ಯು ಗ್ರಹಕರ ಹಿತಾಸಕ್ತಿಗೆ ವಿರುದ್ಧವಾಗಿದೆ. ಮತ್ತು ಸರಗ ವಹಿವಾಟಿನ ತತ್ವಕ್ಕೆ ವಿರುದ್ಧವಾಗಿದೆ. ಈ ನೂತನ ವ್ಯವಸ್ಥೆಯು ಸಾಕಷ್ಟು ತೊಡಕಿನಿಂದ ಕೂಡಿರುವುದರಿಂದ ಗ್ರಾಹಕರಿಗೆ ಮತ್ತು ಎಂ.ಎಸ್.ಎಂ.ಇ. ಆಭರಣೋದ್ಯಮಿಗಳಿಗೆ ಕಿರುಕುಳ ನೀಡುವಂತೆ ಭಾಸವಾಗುತ್ತದೆ. ಮುಖ್ಯವಾಗಿ ಈ ನಿಯಮವು ಪ್ರತಿಯೊಬ್ಬ ನಾಗರಿಕೆನ ದತ್ತಾಂಶ ಖಾಸಗಿತನ ಮತ್ತು ವಹಿವಾಟು ಗೌಪ್ಯತೆಯೊಂದಿಗೆ ಹಸ್ತಕ್ಷೇಪಿಸುವುದರಿಂದ ಈ ನೆಲದ ನ್ಯಾಯ ತತ್ವಗಳಿಗೆ ವೈರುದ್ಧತೆಯಿಂದ ಕೂಡಿದೆ. ದಂಡ ವಿಧಿಸುವ ನಿಬಂಧನೆಗಳು, ಹುಡುಕುವಿಕೆ ಮತ್ತು ಜಪ್ತಿ ಮಾಡುವ ಕ್ರಮಗಳು ಅಂತಿಮವಾಗಿ ಈ ಉದ್ಯಮದಲ್ಲಿ ಹೊಸದೊಂದು ಸಂಹಿತೆಯನ್ನೇ ರೂಪಿಸುವುದಕ್ಕೆ ಎಡೆ ಮಾಡಿಕೊಡುತ್ತದೆ.


ಹಾಲ್‍ಮಾರ್ಕ್ ಕೇಂದ್ರಗಳಲ್ಲಿ ಈಗಾಗಲೇ ಟನ್‍ಗಟ್ಟಲೇ ಆಭರಣಗಳು ಬಾಕಿ ಉಳಿದಿದ್ದು ಇವುಗಳಿಗೆ ಹೆಚ್.ಯು.ಐ.ಡಿ. ಪಡೆಯಲು ತಿಂಗಳುಗಟ್ಟಲೇ ಕಾಯಬೇಕಾಗುತ್ತದೆ. ಅಲ್ಲಿಯವರೆಗೆ ನಾವು ಗ್ರಾಹಕರಿಗೆ ಇವರ ಆಭರಣಗಳನ್ನು ತಲುಪಿಸಲು ಸಾಧ್ಯವಾಗುವುದಿಲ್ಲ. ರಾಷ್ಟ್ರಾದ್ಯಂತ 2 ಲಕ್ಷಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಆಭರಣೋದ್ಯಮಿಗಳು ಅಸ್ತಿತ್ವದಲ್ಲಿದ್ದು 25 ಲಕ್ಷಕ್ಕೂ ಅಧಿಕ ಸಂಖ್ಯೆ ಆಭರಣ ತಯಾರಕರು ಈ ಆಭರಣೋದ್ಯಮವನ್ನು ಅವಲಂಬಿಸಿದ್ದಾರೆ. ಕೂಡಲೇ ಕೇಂದ್ರ ಸರಕಾರ ಪರಿಚಯಿಸಿರುವ ಈ ಹೆಚ್.ಯು.ಐ.ಡಿ. ಸಂಖ್ಯೆಯ ವ್ಯವಸ್ಥೆಯನ್ನು ಹಿಂಪಡೆಯಬೇಕೆಂದು ವ್ಯಾಪಾರಿಗಳು ಒತ್ತಾಯಿಸಿದರು.


ಚಿನ್ನದ ವ್ಯಾಪಾರಿಗಳ ಸಂಘದ ಅದ್ಯಕ್ಷ ಸುಮಂತ ಕನಕಗಿರಿ, ಉಪಾದ್ಯಕ್ಷ ಸುಮಿತ್ ಸೇಠ್, ಕಾರ್ಯದ್ಯಕ್ಷ ಪಂಡರಿನಾಥ ಪವಾರ್, ಇಸ್ರಾರ್ ಅಹ್ಮದ್, ಚಂದನ್ ಸೇಠ್, ಮೌನೇಶ ಕಂಬಾರ, ವರ್ಮಾ ಶೇಠ್ ಮುದಗಲ್, ಬಾಲಾಜಿ ಹಟ್ಟಿ, ಕಾಂತಕುಮಾರ ಮುದಗಲ್, ಪಾಂಡುರಂಗ ಪತ್ತಾರ, ಮೌನೇಶ ಪತ್ತಾರ, ಯಲ್ಲಪ್ಪ, ಮಾನಪ್ಪ ಶರಣಬಸವ, ವೆಂಕಟೇಶ, ಶಿವರಾಜ, ಗಂಗಾಧರ, ಭೀಮಣ್ಣ, ಗೋಪಣ್ಣ, ಮುಕ್ತರ್, ಸುರೇಶ, ಮುಸ್ತಫಾ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!