ರಾಯಚೂರು

ಲಿಂಗಸುಗೂರು ವಿಸಿಬಿ ಶಿಕ್ಷಣ ಸಂಸ್ಥೆಯಲ್ಲಿ ಪಿಯು ವಿದ್ಯಾರ್ಥಿಗಳಿಂದ ಅಕ್ರಮವಾಗಿ ಶುಲ್ಕ ವಸೂಲು ಪ್ರಕರಣ ವಿಸಿಬಿ ಕಾಲೇಜು ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರವೇ ಪ್ರತಿಭಟನೆ

ಲಿಂಗಸುಗೂರು : ಶಿಕ್ಷಣ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕವನ್ನು ವಸೂಲು ಮಾಡಿದ ಸ್ಥಳೀಯ ವಿಸಿಬಿ ಶಿಕ್ಷಣ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಳಿ ಪ್ರತಿಭಟಿಸಿದ ಕರವೇ ಕಾರ್ಯಕರ್ತರು ಶಿಕ್ಷಣಾಧಿಕಾರಿಗಳ ಮೂಲಕ ಪಿಯು ಶಿಕ್ಷಣ ಮಂಡಳಿಯ ಜಿಲ್ಲಾ ಉಪನಿರ್ದೇಶಕ ಸೋಮಶೇಖರಪ್ಪ ಹೊಕ್ರಾಣಿಯವರಿಗೆ ಮನವಿ ಸಲ್ಲಿಸಿದರು.

ಶಿಕ್ಷಣ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಲಿಂಗಸುಗೂರು ವಿಸಿಬಿ ಶಿಕ್ಷಣ ಸಂಸ್ಥೆಯಲ್ಲಿ ಅಕ್ರಮವಾಗಿ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕವನ್ನು ಪಡೆಯಲಾಗುತ್ತಿದೆ. ಪಿಯುಸಿ ವಿದ್ಯಾರ್ಥಿಗಳಿಗೆ ಕನಿಷ್ಠ 35 ಅಂಕಗಳನ್ನು ಪ್ರತಿಯೊಬ್ಬರನ್ನು ಮುಂದಿನ ತರಗತಿಗೆ ಉತ್ತೀರ್ಣಗೊಳಿಸಬೇಕು. ಹೆಚ್ಚಿನ ಅಂಕಗಳನ್ನು ನಿರೀಕ್ಷೆ ಮಾಡುವ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅಸೈನ್‍ಮೆಂಟ್‍ಗಳನ್ನು ನೀಡಬೇಕು. ಆನ್‍ಲೈನ್ ಮೂಲಕವೇ ಮನೆಯಲ್ಲಿ ಕುಳಿತುಕೊಂಡೇ ವಿದ್ಯಾರ್ಥಿ ಅಸೈನ್‍ಮೆಂಟ್ ಬರೆದು ಪುನಃ ಆನ್‍ಲೈನ್‍ನಲ್ಲೇ ಅಪ್‍ಲೋಡ್ ಮಾಡಬೇಕೆನ್ನುವ ನಿಯಮ ಇಲಾಖೆ ರೂಪಿಸಿದಾಗ್ಯೂ, ಲಿಂಗಸುಗೂರು ಪಟ್ಟಣದ ವಿಸಿಬಿ ಶಿಕ್ಷಣ ಸಂಸ್ಥೆಯು ಅಕ್ರಮವಾಗಿ ಪ್ರತಿಯೊಬ್ಬ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಯಿಂದ 50 ರೂಪಾಯಿ ಶುಲ್ಕವನ್ನು ಪಡೆದು ಪ್ರಶ್ನೆ ಪತ್ರಿಕೆ ನೀಡುತ್ತಿರುವುದು ಕಂಡುಬಂದಿದೆ.

ಸಾಮಾಜಿಕ ಅಂತರವಿಲ್ಲದೇ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಗುಂಪುಗುಂಪಾಗಿ ಸೇರಿಸಿ ಶುಲ್ಕ ವಸೂಲು ಮಾಡಲಾಗುತ್ತಿದೆ. ಕಾಲೇಜಿಗೆ ಯಾವುದೇ ಸಕ್ರ್ಯೂಲರ್ ಬಂದಿಲ್ಲದಿದ್ದರೂ ರಾಜಾರೋಷವಾಗಿಯೇ ಹಗಲು ದರೋಡೆಗೆ ಇಳಿದಿರುವ ವಿಸಿಬಿ ಶಿಕ್ಷಣ ಸಂಸ್ಥೆಯ ವಿರುದ್ಧ ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ದೊಡ್ಡವರ ಶಿಕ್ಷಣ ಸಂಸ್ಥೆಯೆಂದು ಅಧಿಕಾರಿಗಳು ಕ್ರಮಕ್ಕೆ ಹಿಂದೇಟು ಹಾಕಿದ್ದೇ ಆದಲ್ಲಿ, ಕಾಲೇಜು ಮುಂದೆ ಧರಣಿ ಸತ್ಯಾಗ್ರಹ ಮಾಡುವ ಮೂಲಕ ಅಧಿಕಾರಿಗಳ ಹಾಗೂ ಶಿಕ್ಷಣ ಸಂಸ್ಥೆಯ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಕರವೇ ಅದ್ಯಕ್ಷ ಜಿಲಾನಿಪಾಷಾ, ಪ್ರದಾನ ಕಾರ್ಯದರ್ಶಿ ಶಿವರಾಜ ನಾಯಕ್, ಅಮರೇಶಸ್ವಾಮಿ, ಅಜೀಜಪಾಷಾ, ರವಿಕುಮಾರ ಬರಗೂಡಿ, ಚಂದ್ರು ನಾಯಕ, ಇರ್ಫಾನ್, ಹನುಮಂತ ನಾಯಕ, ಜಮೀರ್‍ಖಾನ್, ಮಹೆಬೂಬ, ಶರಣಬಸವ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!