ಲಿಂಗಸುಗೂರು ಸರಕಾರಿ ಆಸ್ಪತ್ರೆಯ ಆಡಳಿತ ವಿಫಲ : ಕ್ರಮಕ್ಕೆ ದಸಂಸ ಆಗ್ರಹ
ಲಿಂಗಸುಗೂರು : ಪಟ್ಟಣದ ಸರಕಾರಿ ಆಸ್ಪತ್ರೆಯ ವೈದ್ಯರು, ಸಿಬ್ಬಂಧಿಗಳು ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ನೀಡದೇ ಅಸಡ್ಡೆ ತೋರುತ್ತಿದ್ದಾರೆ. ಆಡಳಿತ ಮಂಡಳಿಯ ವೈಫಲ್ಯವನ್ನು ಖಂಡಿಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ರುದ್ರಗೌಡರಿಗೆ ಮನವಿ ಸಲ್ಲಿಸಿದರು.
ಸರಕಾರಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ವೈದ್ಯರುಗಳು ಖಾಸಗಿ ಆಸ್ಪತ್ರೆಗಳನ್ನು ಆರಂಭಿಸಿ ಹೆಚ್ಚು ಸಮಯ ಹೊರಗಡೆ ಕಳೆಯುತ್ತಿರುವುದು ರೋಗಿಗಳಿಗೆ ನುಂಗದ ತುತ್ತಾಗಿದೆ. ಸರಕಾರಿ ದವಾಖಾನೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯದೇ ಪರದಾಡುವಂತಾಗಿದೆ. ಕರ್ತವ್ಯದಲ್ಲಿ ಹಾಜರಿದ್ದರೂ ಕೆಲ ಸಿಬ್ಬಂಧಿಗಳು ಮಾತ್ರ ಯಾವುದಕ್ಕೂ ಸ್ಪಂಧಿಸದೇ ತಮ್ಮದೇ ಲೋಕದಲ್ಲಿ ಇರುತ್ತಾರೆ. ಪರಿಣಾಮ ಚಿಕಿತ್ಸೆಗೆ, ಲಸಿಕೆ ಹಾಕಿಸಿಕೊಳ್ಳಲು ಬರುವ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಸಂಕಷ್ಟ ಅನುಭವಿಸುವ ಪರಿಸ್ಥಿತಿ ಇದೆ. ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡು ಸಮಸ್ಯೆಗಳ ನಿವಾರಣೆಗೆ ಮುಂದಾಗಬೇಕು. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಸಂಘಟನೆಯ ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ, ತಾಲೂಕು ಅದ್ಯಕ್ಷ ನಾಗರಾಜ ಹಾಲಭಾವಿ, ಪರಶುರಾಮ ಗುಡಿಜಾವೂರು, ಸಾಮಾಜಿಕ ಜಾಲತಾಣದ ಮುಖ್ಯಸ್ಥ ಅಕ್ರಂಪಾಷಾ, ಮಾಳಪ್ಪಗೌಡ ಗುಡಿಜಾವೂರ, ಯಲ್ಲಪ್ಪ ಹಾಲಬಾವಿ, ಹುಸೇನಪ್ಪ ತರಕಾರಿ, ಖಾಸಿಂ ಗುಡಿಜಾವೂರ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಇದ್ದರು.

