ಲಿಂಗಸುಗೂರು : ಇಂಧನ-ಅನಿಲ ಬೆಲೆ ಏರಿಕೆ ಖಂಡಿಸಿ ಸೈಕಲ್ ಜಾಥಾ
ಲಿಂಗಸುಗೂರು : ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲೆಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಶಾಸಕ ಡಿ.ಎಸ್. ಹೂಲಗೇರಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸೈಕಲ್ ಜಾಥಾ ನಡೆಸಿದರು.
ಪಟ್ಟಣದ ಗಡಿಯಾರ ಚೌಕನಲ್ಲಿ ಕಾಂಗ್ರೆಸ್ ಪಕ್ಷ ವತಿಯಿಂದ ಏರ್ಪಡಿಸಿದ ತೈಲ ಬೆಳೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಚಾಲನೆ ನೀಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಸಾಮಾನ್ಯರ ರಕ್ಷಣೆಗೆ ನಿಲ್ಲದೆ ಕಾರ್ಪೋರೇಟ್ ಕಂಪನಿಗಳ ಪರವಾಗಿ ನಿಂತಿದ್ದಾರೆ. ಕರೊನಾ ನಿರ್ವಹಣೆಯಲ್ಲೂ ವಿಫಲರಾಗಿವೆ. ಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದು ಹೇಳಿದರು.
ಇಂಧನ, ಗ್ಯಾಸ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತುಂಬಾ ತೊಂದರೆ ಅನುಭವಿಸುವಂತಾಗಿದ್ದು, ಪಿಎಂ ಮೋದಿ ನೀಡಿದ ಭರವಸೆಗಳು ಹುಸಿಯಾಗಿವೆ. ಎಲ್ಲರನ್ನು ಸಮಾನವಾಗಿ ಸ್ವೀಕರಿಸಿ ನಡೆಯುವ ಏಕೈಕ ಪಕ್ಷ ಕಾಂಗ್ರೆಸ್ ಪಕ್ಷವಾಗಿದೆ ಎಂದು ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಮಾತನಾಡಿದರು.
ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್, ಮುದಗಲ್ ಬ್ಲಾಕ್ ಅದ್ಯಕ್ಷ ದಾವೂದ್, ಜಿಲ್ಲಾಧ್ಯಕ್ಷೆ ನಿರ್ಮಲಾ ಬೆಣ್ಣೆ, ತಾಲೂಕು ಅಧ್ಯಕ್ಷೆ ವಿಜಯಲಕ್ಷ್ಮೀ ದೇಸಾಯಿ, ಮುಖಂಡರಾದ ಶರಣಪ್ಪ ಮೇಟಿ, ಲಾಲಅಹ್ಮದ್ ಸಾಬ, ಸಂಗಣ್ಣ ಬಯ್ಯಾಪುರ, ಹನುಮಂತಪ್ಪ ಕಂದಗಲ್, ಚಂದ್ರಕಾಂತ ನಾಡಗೌಡ, ಸೈಯದ್ ವಾಹಿದ್ ಖಾದ್ರಿ ಸೇರಿ ಕಾರ್ಯಕರ್ತರು ಇದ್ದರು.
