ಸ್ಯಾನಿಟೈಜರ್, ಮಾಸ್ಕ್ ಕಡ್ಡಾಯ ವರ್ಷದ ಮೊದಲ ದಿನ ಉತ್ಸಾಹದಿಂದ ಶಾಲೆಗೆ ಬಂದ ಮಕ್ಕಳು..!
ಲಿಂಗಸುಗೂರು : ಸರಕಾರದ ಆದೇಶದಂತೆ ವರ್ಷದ ಮೊದಲ ದಿನ ಶಾಲೆಗಳು ಆರಂಭವಾಗಿದೆ. ಅಂದುಕೊಂಡಂತೆ ಅಲ್ಲದಿದ್ದರೂ ಕೆಲವಾದರೂ ಮಕ್ಕಳು ಉತ್ಸಾಹದಿಂದ ಶಾಲೆಗೆ ಬರುವ ದೃಶ್ಯಗಳು ಅಲ್ಲಲ್ಲಿ ಕಂಡು ಬಂದವು.
ಪಟ್ಟಣವೂ ಸೇರಿ ತಾಲೂಕಿನ ಹಲವೆಡೆಗಳಲ್ಲಿ ಶಾಲೆಗಳಿಗೆ ಸ್ಯಾನಿಟೈಜರ್ ಮಾಡಿಸಲಾಯಿತು. ಶಾಲೆಗೆ ಬರುವ ಮಕ್ಕಳಿಗೆ ಸ್ಯಾನಿಟೈಜರ್ ಹಾಕುವ ಮೂಲಕ ಹೂವುಗಳನ್ನು ನೀಡಿ ಬರಮಾಡಿಕೊಳ್ಳಲಾಯಿತು. ಸುಮಾರು 9 ತಿಂಗಳ ಬಳಿಕ ಶಾಲೆಯತ್ತ ಮಕ್ಕಳು ಮುಖ ಮಾಡಿದ್ದು, ಬಹುತೇಕ ಪಾಲಕರಲ್ಲಿ ಇನ್ನೂ ದುಗುಡ ಇದೆ.
ಮುನ್ನೆಚ್ಚರಿಕೆಯಿಂದ ಶಾಲೆಗಳನ್ನು ಆರಂಭಿಸಲಾಗಿದೆ. ಪ್ರತಿ ಕೊಠಡಿಗೆ 15 ರಿಂದ 20 ವಿದ್ಯಾರ್ಥಿಗಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಪಾಠ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಪರೀಕ್ಷೆಗೊಳಪಡುತ್ತಿದ್ದಾರೆ. ಸಧ್ಯಕ್ಕೆ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ತರಗತಿಗಳನ್ನು ಮಾತ್ರ ಆರಂಭಿಸಲಾಗಿದೆ. ಎಸ್‍ಎಸ್‍ಎಸಿ ತರಗತಿಗಳು ಬೆಳಗ್ಗೆ 10 ಗಂಟೆಯಿಂದ 12-30ರ ವರೆಗೆ ಮತ್ತು ಕಾಲೇಜುಗಳಲ್ಲಿ ಪ್ರತಿದಿನ 45 ನಿಮಿಷದ ನಾಲ್ಕು ತರಗತಿಗಳನ್ನು ನಡೆಸಲು ಅವಕಾಶ ನೀಡಲಾಗಿದೆ.

