ರಾಯಚೂರು

ಕಾಂಗ್ರೆಸ್ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾದ ಮುಖಂಡ ಶಂಕರಗೌಡ ಹಟ್ಟಿ

ಲಿಂಗಸುಗೂರು : ಕಾಂಗ್ರೆಸ್ ಪಕ್ಷದಲ್ಲಿ ಮೂಲ ಮುಖಂಡರಿಗೆ ಕಾರ್ಯಕರ್ತರಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ. ಏಕ ಚಕ್ರಾಧಿಪತಿಯಂತೆ ಶಾಸಕರು ವರ್ತನೆ ತೋರುತ್ತಿರುವುದು ಅಸಮಾಧಾನ ತಂದಿದೆ. ಕಾಂಗ್ರೆಸ್ ಪಕ್ಷದಲ್ಲಿನ ದುರಾಡಳಿತಕ್ಕೆ ಬೇಸತ್ತು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದೇನೆ ಎಂದು ಕಾಂಗ್ರೆಸ್ ಮುಖಂಡ ಶಂಕರಗೌಡ ಹಟ್ಟಿ ಹೇಳಿದರು.

ಹಟ್ಟಿ ಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಅವರ ನಿವಾಸದಲ್ಲಿ ಆಯೋಜಿಸಿದ್ದ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಲಿಂಗಸುಗೂರು ತಾಲೂಕಿನಲ್ಲಿ ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ದುಡಿದ ಮುಖಂಡರಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ದುರಾಡಳಿತ ನಡೆದಿದೆ. ಹಿರಿಯರಿಗೆ ಮುಖಂಡರಿಗೆ ಯಾವುದೇ ಸ್ಥಾನಮಾನ ಕಲ್ಪಿಸದೇ ಏಕ ಚಕ್ರಾಧಿಪತಿಯಂತೆ ಶಾಸಕರು ವರ್ತನೆ ಮಾಡುತಿದ್ದಾರೆ ಎಂದು ಆರೋಪಿಸಿದರು.

ವ್ಯಕ್ತಿಗತವಾಗಿ ಮಾನಪ್ಪ ವಜ್ಜಲ್ ಅವರು ಜಾತ್ಯಾತೀತ ನೆಲೆಗಟ್ಟಿನ ನಾಯಕರಾಗಿದ್ದಾರೆ. ಯಾವುದೇ ಬೇಧ ಭಾವ ಇಲ್ಲದ ಪ್ರಾಂಜಲ ಮನಸ್ಸಿನ ಇವರ ಗುಣಕ್ಕೆ ಮೆಚ್ಚಿ ಹಾಗೂ ಬಿಜೆಪಿ ತತ್ವ-ಸಿದ್ಧಾಂತಗಳಡಿ ಬರುವ ದಿನಗಳಲ್ಲಿ ಸಕ್ರಿಯವಾಗಿ ಪಕ್ಷವನ್ನು ತಾಲೂಕಿನಲ್ಲಿ ಸಂಘಟನೆ ಮಾಡುವ ಉದ್ದೇಶದಿಂದ ನನ್ನ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುತ್ತಿದ್ದೇನೆ ಎಂದು ಹೇಳಿದರು.

ಹಟ್ಟಿಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಅವರು ಬಿಜೆಪಿ ಪಕ್ಷದ ಬಾವುಟವನ್ನು ನೀಡಿ ಶಂಕರಗೌಡ ಹಾಗೂ ಅವರ ಬೆಂಬಲಿಗರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಬಿಜೆಪಿ ಮಂಡಲ ಅಧ್ಯಕ್ಷ ವೀರನಗೌಡ ಪಾಟೀಲ್, ಮುಖಂಡರಾದ ಡಾ. ಶಿವಬಸಪ್ಪ, ಗಿರಿಮಲ್ಲನಗೌಡ, ವಾಲೆಬಾಬು, ಹನುಮಂತಪ್ಪ ತೊಗರಿ, ಪರಮೇಶ್ ಯಾದವ್, ಗುಂಡಪ್ಪ ಸಾಹುಕಾರ ಸೇರಿದಂತೆ ನೂರಾರು ಕಾರ್ಯಕರ್ತರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!