ಕಾಲುಜಾರಿ ಕಾಲುವೆಗೆ ಬಿದ್ದ ಬಾಲಕ : ಪತ್ತೆಗೆ ಶೋಧಕಾರ್ಯ
ಲಿಂಗಸುಗೂರು : ತಾಲೂಕಿನ ಕಾಳಾಪೂರ ಗ್ರಾಮದ ಹೊರವಲಯದಲ್ಲಿರುವ ನಾರಾಯಣಪುರ ಬಲದಂಡೆ ಕಾಲುವೆಯಲ್ಲಿ ಕಾಲುಜಾರಿ ಬಿದ್ದ ಬಾಲಕ ಬಸವರಾಜ (6)ನ ಶೋಧಕಾರ್ಯ ಅಗ್ನಿಶಾಮಕ ದಳದ ಸಿಬ್ಬಂಧಿಯಿಂದ ನಡೆದಿದ್ದು, 24 ಗಂಟೆ ಕಳೆದರೂ ಬಾಲಕ ಪತ್ತೆಯಾಗದೇ ಇರುವುದು ಪಾಲಕರಲ್ಲಿ ಆತಂಕ ಮೂಡಿಸಿದೆ.
ಚುನಾವಣಾ ಫಲಿತಾಂಶ ದಿನವಾದ ಮಂಗಳವಾರ ಮಧ್ಯಾಹ್ನ ಬಟ್ಟೆ ತೊಳೆಯಲು ಹೋಗುತ್ತಿದ್ದ ತನ್ನ ತಾಯಿಯೊಂದಿಗೆ ಕಾಲುವೆಗೆ ತೆರಳಿದ್ದ ಬಾಲಕ ಬಸವರಾಜ ಆಟವಾಡುತ್ತಾ ಕಾಲುಜಾರಿ ಕಾಲುವೆಗೆ ಬಿದ್ದಿದ್ದಾನೆ. ಕೂಡಲೇ ತಾಯಿ ಚಂದ್ರಮ್ಮ ಮಗುವಿನ ರಕ್ಷಣೆಗೆ ಮುಂದಾಗಿದ್ದಾರಾದರೂ, ನೀರಿನ ರಭಸ ಹೆಚ್ಚಾಗಿರುವ ಕಾರಣ ಬಾಲಕ ತಾಯಿಯ ಕಣ್ಣೆದುರಿಗೇ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂಧಿ ಸ್ಥಳೀಯರ ಸಹಾಯದಿಂದ ಬಾಲಕನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಬುಧವಾರ ಸಂಜೆಯಾದರೂ ಬಾಲಕ ಪತ್ತೆಯಾಗದ ಕಾರಣ ಆತಂಕದ ಛಾಯೆಗಳು ಪಾಲಕರು ಹಾಗೂ ಗ್ರಾಮಸ್ಥರಲ್ಲಿ ಮನೆ ಮಾಡಿವೆ.

