ರಾಯಚೂರು

ವ್ಯಾಪಾರಿಗಳ ನೆರವಿನಿಂದ ನಿರ್ಗತಿಕ ಕುಟುಂಬಕ್ಕೆ ಸಹಾಯ ಮಾಡಿದ ಮುಖ್ಯಾಧಿಕಾರಿ..!


ವರದಿ : ಖಾಜಾಹುಸೇನ್
ಲಿಂಗಸುಗೂರು : ಕಳೆದ ಮೂರು ದಶಕಗಳಿಂದ ಪಟ್ಟಣದಲ್ಲಿ
ವಾಸವಿರುವ ಬಡ ಕುಟುಂಬದ ಶೆಡ್‍ವೊಂದು ಇತ್ತೀಚೆಗೆ ಬೀಸಿದ ಬಿರುಗಾಳಿ ಮಳೆಗೆ ಹಾರಿಹೋದ ಪರಿಣಾಮ ಕುಟುಂಬ ಬೀದಿಗೆ ಬಂದಿತ್ತು.ನೆರೆಹೊರೆಯವರ ನೆರವಿನಿಂದ ಶೆಡ್‍ಅನ್ನು ಮರು ನಿರ್ಮಾಣ ಮಾಡಿಕೊಂಡ ಕುಟುಂಬ ಆಹಾರಕ್ಕೆ ಪರಿತಪಿಸುತ್ತಿತ್ತು. ಮಾಹಿತಿ ತಿಳಿದ ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ವ್ಯಾಪಾರಿಗಳ ಸಹಾಯದಿಂದ
ನಿರ್ಗತಿಕ ಕುಟುಂಬದ ಬಳಿ ತೆರಳಿ ದಿನಸಿ ಸಾಮಗ್ರಿ, ತರಕಾರಿ, ಹಣ್ಣು ವಿತರಣೆ ಮಾಡಿದರು.


ನಿರ್ಜನ ಪ್ರದೇಶದಲ್ಲಿ ಶೆಡ್ ಹಾಕಿಕೊಂಡಿದ್ದ ಕುಟುಂಬ ಬೀದಿ ಬದಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು. ಲಾಕ್‍ಡೌನ್ ಆದಾಗಿನಿಂದ ಪರಿಸ್ಥಿತಿ ಹದಗೆಟ್ಟಿತ್ತು. ಪ್ರಕೃತಿ ವಿಕೋಪಕ್ಕೆ ತುತ್ತಾಗಿ ತಲೆ ಮೇಲಿನ ಸೂರೂ ಕಿತ್ತುಹೋಗಿತ್ತು. ಪರಿಣಾಮ ಕುಟುಂಬದವರು ಜಾಲಿ ಗಿಡಗಳ ನೆರಳಲ್ಲಿ ಮಲಗುವಂಥಹ ಪರಿಸ್ಥಿತಿ ನಿರ್ಮಾಣವಾಗಿತ್ತು.ಅಕ್ಕಪಕ್ಕದವರು ಸೇರಿಕೊಂಡು ಸಹಾಯ ಮಾಡಿದ್ದರಿಂದ ಶೆಡ್ಡನ್ನು ಮರುನಿರ್ಮಾಣ ಮಾಡಿಕೊಂಡ ಕುಟುಂಬ ಆಹಾರಕ್ಕೆ ಪರದಾಡುವ ಪರಿಸ್ಥಿತಿ
ಇತ್ತು. ಇದನ್ನು ಮನಗಂಡ ಪುರಸಭೆ ಮುಖ್ಯಾಧಿಕಾರಿ
ವಿಜಯಲಕ್ಷ್ಮಿಯವರು ಪಟ್ಟಣದಲ್ಲಿನ ವ್ಯಾಪಾರಿಗಳ ಮನವೊಲಿಸಿ ಕಿರಾಣಿ ದಿನಸಿ ಸಾಮಗ್ರಿ, ತರಕಾರಿ, ಹಣ್ಣು ಹಂಪಲಗಳ ಜೊತೆಗೆ ಕೈಲಾದಷ್ಟು ಆರ್ಥಿಕ ನೆರವನ್ನೂ ನೀಡಿದ್ದಾರೆ.


ಪುರಸಭೆ ವ್ಯಾಪ್ತಿಯಲ್ಲಿ ಇಂಥಹ ಬಡ, ನಿರ್ಗತಿಕ, ಅಲೆಮಾರಿ
ಕುಟುಂಬಗಳು ವಾಸಿಸುತ್ತಿವೆ. ಉಳ್ಳವರು, ದಯಾಮಯರು
ಬಡವರ ನೆರವಿಗೆ ಧಾವಿಸುವ ಸದವಕಾಶ ಇದಾಗಿದೆ. ಪವಿತ್ರ ರಂಜಾನ್ ಮಾಸದ ಹೊತ್ತಲ್ಲಿ ಬಹುತೇಕ ಮುಸ್ಲಿಂ ಸಮುದಾಯದ ಸಹೃದಯವಂತರು ಮತೀಯ ಬೇಧ-ಭಾವವಿಲ್ಲದೇ ದಾನ ಧರ್ಮಗಳಲ್ಲಿ ತಲ್ಲೀನಗೊಂಡಿದ್ದಾರೆ.


ಕೊರೊನಾ ಮಹಾಮಾರಿಯ ಹೊಡೆತಕ್ಕೆ ಮಾನವೀಯತೆ
ಜಾಗೃತವಾಗುತ್ತಿದೆ. ಬಡವ-ಬಲ್ಲಿದ ಎನ್ನದೇ ಎಲ್ಲರೂ ತಮ್ಮ
ಆರೋಗ್ಯ ನೆಟ್ಟಗಿಟ್ಟುಕೊಳ್ಳಲು ಪ್ರಾರ್ಥನೆಯಲ್ಲಿ
ತೊಡಗಿಕೊಂಡಿದ್ದಾರೆ. ಕೆಲ ಸಿರಿವಂತರು ತಮ್ಮಷ್ಟಕ್ಕೆ ತಾವಿದ್ದರೆ,ಇದ್ದುದರಲ್ಲಿಯೇ ಹೃದಯವೈಶಾಲ್ಯತೆ, ಮಾನವೀಯ ಕಳಕಳಿ ಇರುವವರು ಮಾತ್ರ ಕೈಲಾದಷ್ಟು ಬಡವರ ಸಹಾಯ ಸಹಕಾರಕ್ಕೆ ಮುಂದಾಗುತ್ತಿದ್ದಾರೆ.


ಕಳೆದ ಬಾರಿ ಲಾಕ್‍ಡೌನ್ ವೇಳೆಯಲ್ಲಿ ವಿವಿಧ ಸಮಾಜದ
ಬಾಂಧವರು, ವ್ಯಾಪಾರಿಗಳು, ಪ್ರಗತಿಪರ ಸಂಘಟನೆಗಳು ಸೇರಿ ಹಲವರು ದಿನಸಿ ಸಾಮಗ್ರಿಗಳ ಕಿಟ್‍ಗಳನ್ನು ವಿತರಣೆ ಮಾಡಿದ್ದರು.ಪ್ರಸ್ತುತ ಸನ್ನಿವೇಶವೂ ಅದಕ್ಕೆ ಹೊರತಾಗಿಲ್ಲ. ಜನತಾ ಕಫ್ರ್ಯೂ ಘೋಷಣ ಆದಾಗಿನಿಂದ ಬೀದಿ ವ್ಯಾಪಾರಕ್ಕೆ ಬ್ರೇಕ್ ಬಿದ್ದಿದೆ. ಪರಿಣಾಮ ಬಡ ವ್ಯಾಪಾರಿಗಳ ಕುಟುಂಬ ನಿರ್ವಹಣೆ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಈ ಬಗ್ಗೆ ಉಳ್ಳವರು ಚಿಂತನೆ ಮಾಡುವ ಅಗತ್ಯತೆ ಇದೆ. ಬಡವರ ನೆರವಿಗೆ
ಧಾವಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಮಾತು ಕೇವಲ ಮಾತಾಗದೇ, ಕೃತಿಯಲ್ಲಿ ಬರುವಂತಾಗಬೇಕುು ಎನ್ನುವ ಆಶಯವೇ ಈ ವರದಿಯದ್ದಾಗಿದೆ..

Leave a Reply

Your email address will not be published. Required fields are marked *

error: Content is protected !!