ರಾಯಚೂರು

ಅನಗತ್ಯ ಓಡಾಟಕ್ಕೆ ಬ್ರೇಕ್ : ಲಾಠಿ ಬಿಸಿ ಮುಟ್ಟಿಸಿದ ಪೋಲಿಸರು

ಲಿಂಗಸುಗೂರು : ಜನತಾ ಕಫ್ರ್ಯೂ ಇದ್ದಾಗ್ಯೂ ನಿಗದಿತ ಸಮಯದ ಬಳಿಕ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಪೋಲಿಸರು ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಕಾರ್ಯಾಚರಣೆಗಿಳಿದರು. ಗಲ್ಲಿಗಳಲ್ಲಿ ವಿನಾಕಾರಣ ಓಡಾಡುತ್ತಿರುವ ಯುವಕರಿಗೆ ಲಾಠಿ ಬಿಸಿ ಮುಟ್ಟಿಸಿ ಮನೆಗೆ ಕಳುಹಿಸಿದರು.

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಬಳಿ ಹಾಕಿದ್ದ ತರಕಾರಿ ವ್ಯಾಪಾರಿಗಳನ್ನೂ ಪೋಲಿಸರು ಎಬ್ಬಿಸಿ ಕಳುಹಿಸಿದರು. ಬಸ್ಟಾಂಡ್ ವೃತ್ತ, ಗಡಿಯಾರ ಚೌಕ್, ಸಂತೆಬಜಾರ್, ಮಾರ್ಕೆಟ್ ಸೇರಿ ನಾನಾ ಏರಿಯಾಗಳಲ್ಲಿ ಸುಖಾಸುಮ್ಮನೇ ಓಡಾಡುತ್ತಿರುವ ಪಡ್ಡೆಗಳಿಗೆ ಬೈಕ್‍ನಲ್ಲಿ ಬೆನ್ನಟ್ಟಿ ಹೋಗಿ ಪೋಲಿಸರು ಲಾಠಿ ರುಚಿ ತೋರಿಸಿದರು. 

ತಾಲೂಕಿನಲ್ಲಿಯೂ ಕೋವಿಡ್ ಪ್ರಕರಣಗಳು ದಿನೇ ದಿನೇ ಉಲ್ಬಣಗೊಳ್ಳುತ್ತಲೇ ಇವೆ. ಆದರೆ, ಜನರಲ್ಲಿ ಮಾತ್ರ ಇದುವರೆಗೂ ಜಾಗೃತಿ ಮಾತ್ರ ಮೂಡದೇ ಇರುವುದು ಸೋಜಿಗ. ನಿತ್ಯ ಸರಕಾರಿ ಆಸ್ಪತ್ರೆಗೆ ರೋಗಿಗಳು ಬರುತ್ತಲೇ ಇದ್ದಾರೆ. ಕೋವಿಡ್ ಕೇರ್ ಸೆಂಟರ್‍ನಲ್ಲಿಯೂ ಹಲವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೆಲವರು ಜ್ವರ, ಶೀತ, ನೆಗಡಿ, ಕೆಮ್ಮು ಇರುವವರಿಗೆ ಮನೆಯಲ್ಲೇ ಕ್ವಾರಂಟೈನ್ ಆಗಿರಲು ವೈದ್ಯರು ಸೂಚನೆ ನೀಡುತ್ತಿದ್ದಾರೆ. 

ಕೆಲಸವಿಲ್ಲದ ಯುವಕರು ಗಲ್ಲಿಗಳಲ್ಲಿ, ಚಕಾರ, ಹುಲಿಮನಿ, ಕೇರಮ್, ಚೆಸ್ ಸೇರಿ ನಾನಾ ಆಟಗಳಲ್ಲಿ ತಲ್ಲೀನರಾಗಿದ್ದಾರೆ. ಸೋಂಕು ನಿಯಂತ್ರಣಕ್ಕೆ ಆಡಳಿತ ಮುತುವರ್ಜಿ ವಹಿಸುತ್ತಿದೆ. ಸಾರ್ವಜನಿಕರೂ ಆಡಳಿತಕ್ಕೆ ಸಹಕಾರ ನೀಡುವತ್ತ ಮುಂದಾಗಬೇಕಿದೆ.

Leave a Reply

Your email address will not be published. Required fields are marked *

error: Content is protected !!