ರಾಯಚೂರು

ಲಿಂಗಸುಗೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಜೆಡಿಎಸ್ ಲೆಕ್ಕಕ್ಕಿಲ್ಲ : ವಜ್ಜಲ್

ಲಿಂಗಸುಗೂರು : ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರ ಆಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ. ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿಯತ್ತ ಬರುತ್ತಿದ್ದಾರೆ. ಕ್ಷೇತ್ರದಲ್ಲೀಗ ಕಾಂಗ್ರೆಸ್ ಮುಳುಗುತ್ತಿರುವ ಹಡಗಿನ ಪರಿಸ್ಥಿತಿಯಲ್ಲಿದ್ದರೆ, ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ ಎಂದು ಹಟ್ಟಿ ಚಿನ್ನದ ಗಣಿ ಅದ್ಯಕ್ಷ ಮಾನಪ್ಪ ವಜ್ಜಲ್ ಹೇಳಿದರು.


ಸ್ಥಳೀಯ ವಿಜಯಮಹಾಂತೇಶ್ವರ ಶಾಖಾಮಠದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿಮಾನಿಗಳಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ದಶಕಗಳಿಂದ ಸಿಗದ ಅವಕಾಶ ಬಿಜೆಪಿ ಸರಕಾರ ಕ್ಷೇತ್ರಕ್ಕೆ ನೀಡಿದೆ. ನನಗೆ ಹಟ್ಟಿ ಚಿನ್ನದ ಗಣಿ ಅದ್ಯಕ್ಷ ಸ್ಥಾನ ದೊರೆತಿರುವುದನ್ನು ಕಾಂಗ್ರೆಸ್ ಪಕ್ಷಕ್ಕೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಸಂಕಟದಿಂದ ಏನೇನೋ ಮಾತನಾಡುತ್ತಿದ್ದಾರೆ. ಈಗ ಬಂದಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಶ್ರಮಿಸುತ್ತೇನೆ. ಏಷ್ಯಾದಲ್ಲೇ ಮಾದರಿ ಗಣಿಯನ್ನಾಗಿ ಮಾಡುವ ಕ್ರಿಯಾಯೋಜನೆ ರಚನೆಗೆ ಈಗಾಗಲೇ ಆಡಳಿತ ಮಂಡಳಿ ಸನ್ನದ್ಧವಾಗುತ್ತಿದೆ. ಗಣಿಯ ಕಾರ್ಮಿಕರ ನೋವು-ನಲಿವುಗಳಲ್ಲಿ ನಾವು ಸದಾ ಭಾಗಿಯಾಗಿರುತ್ತೇವೆ ಎಂದು ಭರವಸೆ ನೀಡಿದರು.


ಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕ್ಷೇತ್ರದ ಸಿಂಹಪಾಲು ನಮ್ಮದಾಗಲಿದೆ. ಪಕ್ಷದ ಮುಖಂಡರು-ಕಾರ್ಯಕರ್ತರು ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿ ಸರಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡುವ ಮೂಲಕ ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದು ವಜ್ಜಲ್ ಕರೆ ನೀಡಿದರು.

Leave a Reply

Your email address will not be published. Required fields are marked *

error: Content is protected !!