ಹಳ್ಳದ ಸೇತುವೆ ಶಿಥಿಲ : ಕ್ರಮಕ್ಕೆ ಕರವೇ ಆಗ್ರಹ
ಲಿಂಗಸುಗೂರು : ಪುರಸಭೆ ವ್ಯಾಪ್ತಿಯ 4 ಮತ್ತು 10ನೇ ವಾರ್ಡುಗಳಿಗೆ ಸಂಪರ್ಕ ಕಲ್ಪಿಸುವ ಹಳ್ಳದ ಸೇತುವೆ ಶಿಥಿಲಗೊಂದು ಕುಸಿದು ರಾಡ್‍ಗಳು ತೇಲಿದ್ದು, ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಗ್ರಹಿಸಿದರು.
ಕರವೇ ಅದ್ಯಕ್ಷ ಜಿಲಾನಿಪಾಷಾ ನೇತೃತ್ವದಲ್ಲಿ ವಾರ್ಡ್ ನಿವಾಸಿಗಳು ಹಾಗೂ ಸಂಘಟನೆ ಕಾರ್ಯಕರ್ತರು, ಪುರಸಭೆ ಅದ್ಯಕ್ಷರು, ಇಂಜಿನಿಯರ್‍ರನ್ನು ಸ್ಥಳಕ್ಕೆ ಕರೆಸಿ ವಾಸ್ತವ ಸ್ಥಿತಿಯ ದರ್ಶನ ಮಾಡಿಸಿದರು. ಹಲವು ವರ್ಷಗಳಿಂದ ನಿರ್ಮಾಣ ಮಾಡಿದ್ದ ಸೇತುವೆ ಸಂಪೂರ್ಣವಾಗಿ ಶಿಥಿಲವಾಗಿದೆ. ನಿರ್ಮಿಸಿದ ಸೇತುವೆ ಕಳಪೆ ಗುಣಮಟ್ಟದ ಕಾಮಗಾರಿಯಾಗಿದ್ದು, ರಾಡ್‍ಗಳು ತುಕ್ಕುಹಿಡಿದು ಮೇಲೆ ತೇಲುತ್ತಿವೆ. ಕಾಂಕ್ರಿಟ್ ಉದುರಿ ಸಾರ್ವಜನಿಕರ ಓಡಾಟಕ್ಕೆ ಅನಾನುಕೂಲವಾಗಿದೆ. ನಿತ್ಯ ಈ ರಸ್ತೆಯಲ್ಲಿ ನೂರಾರು ಜನರ ಓಡಾಟ ಇರುತ್ತದೆ. ಈ ಬಗ್ಗೆ ಪುರಸಭೆಗೆ ಈಗಾಗಲೇ ಮಾಹಿತಿ ನೀಡಿದಾಗ್ಯೂ ಯಾರೂ ಕ್ರಮಕ್ಕೆ ಮುಂದಾಗದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆಂದು ನಿವಾಸಿಗಳು ಆರೋಪಿಸಿ, ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರ ಮನವಿಗೆ ಸ್ಪಂಧಿಸಿದ ಪುರಸಭೆ ಅದ್ಯಕ್ಷೆ ಗದ್ದೆಮ್ಮಾ ಭೋವಿ ತುರ್ತಾಗಿ ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕ್ಕೆ ಮುಂದಾಗುವುದಾಗಿ ಭರವಸೆ ನೀಡಿದರು.
ಪುರಸಭೆ ಇಂಜಿನಿಯರ್ ಹಸನ್‍ಸಾಬ, ಮುಖಂಡ ಯಮನೂರು ಭೋವಿ, ಕರವೇ ಕಾರ್ಯಕರ್ತರಾದ ಹನುಮಂತ ನಾಯಕ, ಇರ್ಫಾನ್ ಚೌದ್ರಿ, ಅಜೀಜ್‍ಪಾಷಾ, ಆರಿಫ್ ಸೇರಿ ವಾರ್ಡ್ ನಿವಾಸಿಗಳು ಈ ಸಂದರ್ಭದಲ್ಲಿ ಇದ್ದರು.

