ಕನ್ನಡಕ್ಕೆ ಪ್ರಧಾನ್ಯತೆ ನೀಡದ ಖಾಸಗಿ ಶಿಕ್ಷಣ ಸಂಸ್ಥೆಗಳು : ಕ್ರಮಕ್ಕೆ ಒತ್ತಾಯ
ಲಿಂಗಸುಗೂರು : ಕನ್ನಡನಾಡಿನಲ್ಲಿ ಕನ್ನಡಕ್ಕೇ ಆಧ್ಯತೆ ನೀಡದೇ ಕೇವಲ ಆಂಗ್ಲ ಭಾಷೆಯಲ್ಲಿಯೇ ಕರಪತ್ರಗಳು, ಬ್ಯಾನರ್‍ಗಳನ್ನು ಹಾಕುವ ಮೂಲಕ ಪ್ರಚಾರದಲ್ಲಿ ತೊಡಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಶಿಸ್ತುಕ್ರಮಕ್ಕೆ ಮುಂದಾಗಬೇಕೆಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಕಾಯರ್ತರು ಒತ್ತಾಯಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, ಶೈಕ್ಷಣಿಕ ವರ್ಷ ಆರಂಭಕ್ಕೆ ಸಿದ್ಧತೆ ನಡೆದಿರುವುದು ಸ್ವಾಗತಾರ್ಹ ಕ್ರಮ.
ಖಾಸಗಿ ಶಿಕ್ಷಣ ಸಂಸ್ಥೆಗಳು ಬಹುತೇಕ ತಮ್ಮ ಶಾಲೆಗಳಲ್ಲಿ ಕರಪತ್ರಗಳು, ಬ್ಯಾನರ್‍ಗಳು, ಭಿತ್ತಿಪತ್ರಗಳು ಸೇರಿ ಪ್ರಚಾರದಲ್ಲಿ ಕನ್ನಡವನ್ನು ನಿರ್ಲಕ್ಷಿಸಿ ಕೇವಲ ಇಂಗ್ಲಿಷ್ ಭಾಷೆಗೆ ಆಧ್ಯತೆ ನೀಡಿರುವುದು ಖಂಡನೀಯ. ಅಲ್ಲದೇ, ಅರ್ಧದಷ್ಟು ಆನ್‍ಲೈನ್ ಶುಲ್ಕ ಪಡೆಯಬೇಕೆನ್ನುವ ನಿಯಮವಿದ್ದಾಗ್ಯೂ, ಪೂರ್ತಿಯಾಗಿ ಆನ್‍ಲೈನ್ ಶುಲ್ಕವನ್ನು ನೀಡಲು ಪಾಲಕರಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ದುಂಬಾಲು ಬೀಳುತ್ತಿವೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರಿಗೆ ಇದು ಹೊರೆಯಾಗುತ್ತಿದೆ. ಕೂಡಲೇ ಶಿಕ್ಷಣ ಇಲಾಖೆ ಇತ್ತ ಗಮನ ಹರಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.
ಸಂಘಟನೆ ಅದ್ಯಕ್ಷ ತಿಮ್ಮಾರೆಡ್ಡಿ ಮುನ್ನೂರು, ಮುಖಂಡರಾದ ಮೌನೇಶರೆಡ್ಡಿ, ನಾಗರಾಜ, ಸುರೇಶ, ಬಸವರಾಜ, ರಾಮು ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

