ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿಯ ವರ್ತನೆಗೆ ಜೆಡಿಎಸ್ ಆಕ್ರೋಶ ರಾಯಚೂರು ಜಿಲ್ಲಾಧಿಕಾರಿಯೂ ಮುಖ್ಯಾಧಿಕಾರಿ ಮೇಲೆ ಕ್ರಮಕ್ಕೆ ಹಿಂದೇಟು : ಆರೋಪ
ಲಿಂಗಸುಗೂರು : ಕೋವಿಡ್ ಸಂಕ್ರಮಣ ಕಾಲದಲ್ಲಿ ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‍ಗಳಲ್ಲಿ ಚರಂಡಿಗಳು ತುಂಬಿ, ರಸ್ತೆಗೆ ಕಲುಶಿತ ನೀರು ಹರಿಯುತ್ತಿರುವುದಲ್ಲದೇ ಸ್ವಚ್ಛತೆ ಮಾಯವಾಗಿ ವಾತಾವರಣವೆಲ್ಲಾ ರೋಗಗ್ರಸ್ಥವಾಗಿದೆ. ಪುರಸಭೆ ಮುಖ್ಯಾಧಿಕಾರಿ ಆಡಳಿತ ಮಂಡಳಿಯೊಂದಿಗೆ ಸ್ಪಂದಿಸದೇ ತಮ್ಮದೇ ಕಾರುಬಾರು ಮಾಡುತ್ತಿದ್ದಾರೆ. ಇವರ ವಿರುದ್ಧ ರಾಯಚೂರು ಜಿಲ್ಲಾಧಿಕಾರಿಗಳಿಗೂ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಡಿಸಿಯವರು ಮುಖ್ಯಾಧಿಕಾರಿ ವಿಜಯಲಕ್ಷ್ಮಿ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆಂದು ಜೆಡಿಎಸ್ ಮುಖಂಡ ಸಿದ್ದು ಬಂಡಿ ಆರೋಪಿಸಿದರು.
ಸ್ಥಳೀಯ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಈಗಾಗಲೇ ಕೋವಿಡ್ ಸೊಂಕಿನಿಂದ ಜನ ತತ್ತರಿಸುತ್ತಿದ್ದಾರೆ. ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ನೀಡಬೇಕಾದ ಸಮಯ ಇದಾಗಿದ್ದರೂ, ಮುಖ್ಯಾಧಿಕಾರಿ ವಿಜಯಲಕ್ಷ್ಮಿಯವರು ಮಾತ್ರ ಕೇವಲ ಟ್ಯಾಕ್ಸ್ ವಸೂಲಿಯಲ್ಲಿ ತೊಡಗಿಕೊಂಡಿರುವುದು ಖೇದಕರ. ಅಧಿಕಾರಲ್ಲಿ ಜೆಡಿಎಸ್ ಅದ್ಯಕ್ಷರಿದ್ದಾಗ್ಯೂ ಅದ್ಯಕ್ಷರ ಮಾತಿಗೆ ಕಿಮ್ಮತ್ತು ನೀಡದೇ ತಮ್ಮದೇ ಅಹಂನಲ್ಲಿ ಮುಖ್ಯಾಧಿಕಾರಿಗಳು ಕೆಲಸ ನಡೆಸಿರುವುದು ವಿಷಾದಕರ. ಪಟ್ಟಣದ ವಿವಿಧ ವಾರ್ಡ್‍ಗಳಲ್ಲಿ ಮೂರ್ನಾಲ್ಕು ದಿನಕ್ಕೊಮ್ಮೆ ನೀರು ಬಿಡಲಾಗುತ್ತದೆ. ಸಾರ್ವಜನಿಕರ ಕೆಲಸ ಕಾರ್ಯಗಳೂ ಸಕಾಲಕ್ಕೆ ಆಗುತ್ತಿಲ್ಲ. ಸಣ್ಣ-ಪುಟ್ಟ ಕೆಲಸಕ್ಕೂ ತಿಂಗಳುಗಟ್ಟಲೇ ಕಚೇರಿಗೆ ಅಲೆಯುವುದು ತಪ್ಪುತ್ತಿಲ್ಲ. ಬಿಜೆಪಿಯ ಮಾಜಿ ಶಾಸಕ ಮಾನಪ್ಪ ವಜ್ಜಲ್‍ರ ಕೃಪಾಶೀರ್ವಾದ ಈ ಮುಖ್ಯಾಧಿಕಾರಿ ಮೇಲಿದೆ. ಹಾಲಿ ಶಾಸಕರೂ ಕೂಡ ಮುಖ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಸಾರ್ವಜನಿಕರ ಕೆಲಸ ಕಾರ್ಯಗಳನ್ನು ವಿಳಂಬ ಮಾಡುವ ಜೊತೆಗೆ ಆಡಳಿತ ಮಂಡಳಿಯ ಜೊತೆಗೆ ಅಭಿವೃದ್ಧಿ ವಿಷಯದಲ್ಲಿ ಸ್ಪಂಧಿಸದ ಮುಖ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ಸರಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸರಕಾರ ವಿವಿಧ ವಲಯಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿರುವುದು ಅವೈಜ್ಞಾನಿಕವಾಗಿದ್ದು, ಕೂಡಲೇ ಮರು ಪರಿಶೀಲನೆ ಮಾಡಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ರಾಜ್ಯದಲ್ಲಿ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಪತ್ರಕರ್ತರ ಹಿತರಕ್ಷಣೆ ಕಾಪಾಡಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಬಂಡಿ ಆಗ್ರಹಿಸಿದರು.
ಜೆಡಿಎಸ್ ಮುಖಂಡರು, ಕಾರ್ಯಕರ್ತರು ಕೋವಿಡ್ ಸಂಕಷ್ಟದಲ್ಲಿರುವ ಬಡವರಿಗೆ, ನಿರ್ಗತಿಕರಿಗೆ ಕಳೆದ ವಾರದಿಂದ ಆಹಾರ ಪೊಟ್ಟಣಗಳನ್ನು ನೀಡುತ್ತಾ ಇದ್ದೇವೆ. ಕಳೆದ ವರ್ಷ ಲಾಕ್‍ಡೌನ್‍ನಲ್ಲಿ ಸಿಲುಕಿದ್ದ ಕೂಲಿಕಾರ್ಮಿಕರನ್ನು ಗೋವಾ, ಮಹಾರಾಷ್ಟ್ರ, ಆಂದ್ರ, ತೆಲಂಗಾಣ ಸೇರಿ ಇತರೆ ರಾಜ್ಯಗಳಿಂದ ಸ್ವಗ್ರಾಮಗಳಿಗೆ ಕರೆಸಿಕೊಳ್ಳಲಾಗಿತ್ತು. ನಾವು ಪ್ರಚಾರಕ್ಕಾಗಿ ಕೆಲಸ ಮಾಡುವುದಿಲ್ಲ. ಜನರ ಆರೋಗ್ಯ ಹಿತ ರಕ್ಷಣೆಗಾಗಿ ಕೆಲಸ ಮಾಡುತ್ತೇವೆಂದು ಜೆಡಿಎಸ್ ಅದ್ಯಕ್ಷ ನಾಗಭೂಷಣ ಹೇಳಿದರು.
ರಾಷ್ಟ್ರೀಯ ದಿನಾಚರಣೆ, ಜಯಂತಿ, ಹಬ್ಬ ಹರಿದಿನಗಳು ಸೇರಿ ಯಾವುದೇ ವಿಶೇಷ ಸಂದರ್ಭಗಳಿರಲಿ ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಪರವಾಗಿ ವಾಲ್ ಪೋಸ್ಟ್ ಮಾಡುವ ಮೂಲಕ ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಯುವ ಘಟಕದ ಅದ್ಯಕ್ಷರಾಗಿ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿರುವ ಇಮ್ತೆಯಾಜ್ ಪಾಷಾರ ಅನುಪಸ್ಥಿತಿ ಸುದ್ದಿಗೋಷ್ಠಿಯಲ್ಲಿ ಎದ್ದು ಕಾಣುತ್ತಿತ್ತು.
ಮುಖಂಡರಾದ ಸಿದ್ದು ಬಡಿಗೇರ್, ಪರಶುರಾಮ ಕೆಂಭಾವಿ, ವಿಜಯಕುಮಾರ ಈ ಸಂದರ್ಭದಲ್ಲಿ ಇದ್ದರು.

