ಲಿಂಗಸುಗೂರು : ಮಧ್ಯಕ್ಕಾಗಿ ನಸುಕಿನಿಂದಲೇ ಕ್ಯೂ ನಿಂತ ಎಣ್ಣೆದಾಸರು..!
ಖಾಜಾಹುಸೇನ್
ಲಿಂಗಸುಗೂರು : ಸಂಸಾರಿಗಳಿಗೆ ಮನೆಗೆ ಬೇಕಾದ ಅಗತ್ಯ ವಸ್ತುಗಳ ಖರೀದಿ ಮಾಡುವ ಚಿಂತೆಯಾದರೆ, ವ್ಯಸನಿಗಳಿಗೆ ತಮ್ಮ ಚಟ ತೀರಿಸಿಕೊಳ್ಳುವ ಚಿಂತೆ..! ಹೌದು ಲಿಂಗಸುಗೂರು ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನದ ವರೆಗೆ ಲಾಕ್‍ಡೌನ್ ಸಡಿಲಿಕೆ ಮಾಡಿದ್ದರ ಹಿನ್ನೆಲೆಯಲ್ಲಿ ನಸುಕಿನಿಂದಲೇ ಎಣ್ಣೆದಾಸರು ಬಹುತೇಕ ಬಾರ್‍ಶಾಪ್‍ಗಳು ಮುಂದೆ ಕ್ಯೂ ನಲ್ಲಿ ನಿಂತಿರುವುದು ಕಂಡು ಬಂತು.
ಮತ್ತೆ ಮೂರು ದಿನಗಳ ಕಾಲ ಲಾಕ್‍ಡೌನ್ ಮುಂದುವರೆಯುವ ಸೂಚನೆ ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ನೀಡಿದ್ದರಿಂದ ಎಣ್ಣೆದಾಸರು ಮಾತ್ರ ಮೊದಲಿಗೆ ತಮ್ಮ ತಮ್ಮ ನೆಚ್ಚಿನ ಅಂಗಡಿಗಳಿಗೆ ತೆರಳಿ ಮೂರು ದಿನಕ್ಕೆ ಬೇಕಾಗುವಷ್ಟು ಮಾಲನ್ನು ಖರೀದಿಸಿ ಹೊತ್ತೊಯ್ಯುತ್ತಿರುವುದು ಕಂಡು ಬಂತು. ಪುರುಷರು ಒತ್ತಟ್ಟಿಗಿರಲಿ ಮಹಿಳೆಯರೂ ಎಣ್ಣೆ ಕೊಳ್ಳುವ ಸಾಲಿನಲ್ಲಿ ಕಾಣಿಸಿದ್ದು, ನೋಡುಗರಲ್ಲಿ ಅಚ್ಚರಿ ಮೂಡಿಸಿತು.
ಸ್ಥಳೀಯ ಎಂಎಸ್‍ಐಎಲ್ ಸನ್ನದು ಮಳಿಗೆಗಳು ಸೇರಿ ಬಾರ್‍ಶಾಪ್‍ಗಳ ಮುಂದೆ ನಿಯಮಾನುಸಾರ ಟಂಬರ್‍ಗಳನ್ನು ಕಟ್ಟಿ ಗ್ರಾಹಕರು ಸಾಲುಗಟ್ಟಿ ಬರುವಂತೆ ವ್ಯವಸ್ಥೆ ಮಾಡಲಾಗಿತ್ತು. ನಿಯಮವನ್ನು ತಪ್ಪದ ವ್ಯಸನಿಗಳು ಮಾತ್ರ ಕ್ಯೂನಲ್ಲಿಯೇ ಹೋಗಿ ತಮ್ಮ ನೆಚ್ಚಿನ ಬ್ರ್ಯಾಂಡ್‍ಗಳನ್ನು ಕೊಂಡುಕೊಂಡರು. ತರಕಾರಿ ಮಾರುಕಟ್ಟೆಯಲ್ಲದರೂ ಸದ್ದು ಗದ್ದಲ ಕಂಡು ಬಂತು. ಆದರೆ, ಬಾರ್‍ಶಾಪ್‍ಗಳ ಮುಂದೆ ಹೆಚ್ಚಿನ ಗ್ರಾಹಕರು ಇದ್ದರಾದರೂ ಶಾಂತಚಿತ್ತರಾಗಿ ಪರಸ್ಪರ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡಿದ್ದು ವಿಶೇಷವಾಗಿತ್ತು.
ಮನೆಯಲ್ಲಿ ಪರಿಸ್ಥಿತಿ ಹೇಗಿದ್ದರೂ ಪರವಾಗಿಲ್ಲಾ, ದುಡ್ಡು ಹೊಂಚಿಕೊಂಡ ಎಣ್ಣೆದಾಸರು ಮಾತ್ರ ತಮ್ಮ ವ್ಯಸನವನ್ನು ತೀರಿಸಿಕೊಳ್ಳುವಲ್ಲಿ ಬ್ಯುಸಿಯಾಗಿದ್ದರು.

