ರಾಯಚೂರು

ಲಿಂಗಸುಗೂರು ಮುಸ್ಲಿಂ ಸಮುದಾಯದ ಯುವ ಪಡೆಯ ಕಾರ್ಯ ಅನುಕರಣೀಯ ಸರಕಾರದ ಅನುದಾನಕ್ಕೆ ಕಾಯದೇ, ಸ್ವಂತ ಖರ್ಚಿನಲ್ಲಿ ಖಬರಸ್ಥಾನ್ ಅಭಿವೃದ್ಧಿ

ಲಿಂಗಸುಗೂರು : ಅಲ್ಲಿದೆ ನಮ್ಮ ಮನೆ, ಇಲ್ಲಿ ಬಂದೆ ಸುಮ್ಮನೆ.. ಎನ್ನುವ ಸಾಹಿತ್ಯದಂತೆ ಭೂಮಿ ಮೇಲೆ ಮನುಷ್ಯನ ಆಯಸ್ಸು ಕ್ಷಣಿಕವಾದದ್ದು. ನಾವು ಶಾಶ್ವತವಾಗಿ ನೆಲೆಯೂರಬೇಕಾದ ಜಾಗ ಖಬರಸ್ಥಾನ್ (ರುದ್ರಭೂಮಿ) ಆಗಿದೆ. ಅದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯವಾಗಿದೆ. ಇದಕ್ಕಾಗಿ ಸರಕಾರದ ಅನುದಾನವನ್ನು ನಿರೀಕ್ಷೆ ಮಾಡದೇ ಹಿರಿಯರ ಮಾರ್ಗದರ್ಶನದಲ್ಲಿ ಯುವಪಡೆಯು ಖಬರಸ್ಥಾನ ಅಭಿವೃದ್ಧಿಗೆ ಮುಂದಾಗಿದೆ ಎಂದು ಮುಫ್ತಿ ಸೈಯದ್ ಯೂನೂಸ್ ಖಾಸ್ಮಿ ಹೇಳಿದರು.

ಸ್ಥಳೀಯ ಕರಡಕಲ್ ರಸ್ತೆಗೆ ಹೊಂದಿಕೊಂಡಿರುವ ಖಬರಸ್ಥಾನದಲ್ಲಿ ಬಹು ವರ್ಷಗಳಿಂದ ಜಾಲಿ ಮುಳ್ಳು ಬೆಳೆದು ವಾತಾವರಣ ಕಲುಶಿತವಾಗಿತ್ತು. ಅಲ್ಲದೇ, ಕೆಲವು ಕಡೆ ಖಬರಸ್ಥಾನದ ಜಾಗೆ ಒತ್ತುವರಿಯಾಗಿತ್ತು. ಸುಮಾರು 20 ಎಕರೆಯಷ್ಟು ವಿಶಾಲವಾಗಿರುವ ಈ ಜಾಗೆಯ ಸ್ವಚ್ಛತೆಗೆ ಯುವಕರು ಮುಂದಾಗಿರುವುದು ಶ್ಲಾಘನೀಯ ಕಾರ್ಯ. ಯಾರ ಬಳಿಯೂ ಕೈ ಚಾಚದೇ ಯುವಕ ಮಿತ್ರರೇ ತಮ್ಮ ಕಡೆಯಿಂದ ಚಂದಾ ಪಟ್ಟಿ ಜಮಾಯಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಇದು ಜಿಲ್ಲೆ ಮತ್ತು ರಾಜ್ಯದ ಇತರರಿಗೂ ಅನುಕರಣೀಯ ಕಾರ್ಯವಾಗಿದೆ ಎಂದು ಮೌಲಾನಾ ಹೇಳಿದರು. 

ಲಾಕ್‍ಡೌನ್ ಅವಧಿಯನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಕಳೆದ ಐದು ದಿನಗಳಿಂದ ಖಬರಸ್ಥಾನ್ ಸ್ವಚ್ಛತೆ ಹಾಗೂ ಅಭಿವೃದ್ಧಿಗೆ ಮುಂದಾಗಿದ್ದೇವೆ. ಸಮಾಧಿಗಳಿಗೆ ಧಕ್ಕೆಯಾಗದಂತೆ ಬೆಳೆದಿರುವ ಜಾಲಿಮುಳ್ಳು, ಕಸಕಡ್ಡಿಯನ್ನು ಸ್ವಚ್ಚಗೊಳಿಸಲಾಗುತ್ತಿದೆ. ಕೆಲವೆಡೆ ಇರುವ ಗುಂಡುಕಲ್ಲುಗಳನ್ನು, ದೊಡ್ಡ-ದೊಡ್ಡ ಜಾಲಿಗಿಡಗಳನ್ನು ಜೆಸಿಬಿ ಯಂತ್ರಗಳ ಸಹಾಯದಿಂದ ಸ್ವಚ್ಛಗೊಳಿಸಲಾಗುತ್ತಿದೆ. ಈ ಕಾರ್ಯಕ್ಕೆ ನಮ್ಮ ಸಮಾಜದ ಹಿರಿಯರು ಬೆನ್ನು ತಟ್ಟಿದ್ದಾರೆ.
ನಮ್ಮ ಕಾರ್ಯಕ್ಕೆ ಕೈಜೋಡಿಸುವ ಆಸಕ್ತಿ ಇರುವ ಯುವಕರು, ಸಮುದಾಯ ಬಾಂಧವರು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ 99862 36204, 99869 82572, 99729 31200 ಕರೆ ಮಾಡಬಹುದಾಗಿದೆ ಎಂದು ಕಮೀಟಿ ಖಬರಸ್ಥಾನ್ ಅಭಿವೃದ್ಧಿ ಸಮಿತಿ ಸದಸ್ಯ ಇಮ್ತೆಯಾಜ್ ಕೋರಿದ್ದಾರೆ.

ಇಬ್ರಾಹಿಂ ಕಾರ್ಪೆಂಟರ್, ಅಮೀನ್ ಗ್ಯಾರಂಟಿ, ರಿಯಾಜ್, ಜಾನಿ ಟೈಲರ್, ಇರ್ಷಾದ್, ನಾಸಿರ್, ಸಿರಾಜ್, ಮೊಹಮ್ಮದ್ ಕೆಎಫ್‍ಸಿ, ಹುಸೇನ್‍ಸಾಬ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!