ರಾಯಚೂರು

ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿ ಬೆನ್ನಿಗೆ ನಿಂತ ಬಿಜೆಪಿ ಸದಸ್ಯರು..! ಭಷ್ಟಾಚಾರಕ್ಕೆ ಕಡಿವಾಣ, ಮಧ್ಯವರ್ತಿಗಳನ್ನು ದೂರ ಇಟ್ಟದ್ದೇ ನೋವಾಗಿದೆ : ವ್ಯಂಗ್ಯ

ಲಿಂಗಸುಗೂರು : ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದಕ್ಕಿಂತ ಮುಂಚೆ ತಾನೆಷ್ಟು ಸಾಚಾ ಎನ್ನುವುದನ್ನು ಮನಗಾಣಬೇಕು. ದಶಕಗಳಿಂದ ಲಿಂಗಸುಗೂರು ಪುರಸಭೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಗೂ ಮಧ್ಯವರ್ತಿಗಳಿಗೆ ಕೋಕ್ ಕೊಟ್ಟಿದ್ದೇ ಜೆಡಿಎಸ್‍ನವರಿಗೆ ನೋವಾಗಿದೆ ಎಂದು ಪುರಸಭೆ ಸದಸ್ಯ ಮುದುಕಪ್ಪ ನಾಯಕ ವ್ಯಂಗ್ಯವಾಡಿದರು.

ಸ್ಥಳೀಯ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೆಡಿಎಸ್ ಮುಖಂಡ ಸಿದ್ದುಬಂಡಿಯವರು ನೀಡಿದ್ದ ಹೇಳಿಕೆಗೆ ತಿರುಗೇಟು ನೀಡುತ್ತಾ, ಮಾಜಿ ಶಾಸಕ ಮಾನಪ್ಪ ವಜ್ಜಲ್‍ರ ಬಗ್ಗೆ ಹಗುರವಾಗಿ ಮಾತನಾಡಿದ್ದಲ್ಲದೇ, ಪುರಸಭೆ ಮುಖ್ಯಾಧಿಕಾರಿ ಅವರ ಕೈಗೊಂಬೆ ಎಂದಿರುವುದು ಸತ್ಯಕ್ಕೆ ದೂರವಾದ ಮಾತಾಗಿದೆ. ಇಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮತ್ತು ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾನೂನಾತ್ಮಕವಾಗಿ ಕೆಲಸ ನಿರ್ವಹಿಸಲು ಮುಖ್ಯಾಧಿಕಾರಿಗಳನ್ನು ವರ್ಗಾಯಿಸಿಕೊಂಡು ತಂದಿರುವುದು ಸತ್ಯ. ಆದರೆ, ತಮ್ಮ ಬೇಳೆ ಬೇಯುತ್ತಿಲ್ಲ ಎಂದು ಇಲ್ಲಸಲ್ಲದ ಆರೋಪ ಮಾಡುತ್ತಾ ಮುಖ್ಯಾಧಿಕಾರಿಗಳ ವಿರುದ್ಧ ಆರೋಪಿಸುವ ಭರದಲ್ಲಿ ಮಾಜಿ ಶಾಸಕರನ್ನು ತೆಗಳಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಪಕ್ಷದವರೇ ಅದ್ಯಕ್ಷರಾಗಿದ್ದಾರೆ, ಅವರು ಅಭಿವೃದ್ಧಿಗೆ ಸ್ಪಂಧಿಸದೇ ಕಾನೂನು ಬಾಹಿರ ಕಾರ್ಯಗಳನ್ನು ಮಾಡುವಂತೆ ಮುಖ್ಯಾಧಿಕಾರಿಗಳಿಗೆ ಹೇಳುತ್ತಿರುವುದರಿಂದ ಅದಕ್ಕೆ ಮುಖ್ಯಾಧಿಕಾರಿಗಳು ಸ್ಪಂದಿಸುತ್ತಿಲ್ಲ. ಹೀಗಾಗಿ ಮುಖ್ಯಾಧಿಕಾರಿಗಳ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ತಮಗೆ ಅಧಿಕಾರ ನಡೆಸುವ ಸಾಮಥ್ರ್ಯ ಇಲ್ಲದೇ ಇದ್ದರೆ ಆ ಕುರ್ಚಿಯಲ್ಲಿ ಕೂಡಬಾರದು. ರಾಜೀನಾಮೆ ನೀಡಿ ಮತ್ತೊಬ್ಬ ಸಮರ್ಥರಿಗೆ ಸೀಟು ಬಿಟ್ಟುಕೊಡಬೇಕು. ಕಳೆದ ಮೂರು ವರ್ಷಗಳ ಹಿಂದೆ ತಮ್ಮದೇ ಪಕ್ಷದವರಾದ ಹೆಚ್‍ಡಿ ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆಗ ಕ್ಷೇತ್ರದ-ಪಟ್ಟಣದ ಅಭಿವೃದ್ಧಿ ಬಗ್ಗೆ ಕಾಳಜಿ ತೋರದೇ, ತಮ್ಮ ವ್ಯವಹಾರಿಕ ಕ್ವಾರಿಗಳನ್ನು ಪುನರ್ ಆರಂಭ ಮಾಡಿಸಿಕೊಂಡ ಸಿದ್ದು ಬಂಡಿಯವರು ಈಗ ಬಂದು ಅಭಿವೃದ್ಧಿಯ ವಿಷಯ ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ನಾಯಕ ವ್ಯಂಗ್ಯವಾಡಿದರು.

ರಾಜ್ಯದಲ್ಲಿ ನಮ್ಮದೇ ಸರಕಾರ ಇದ್ದರೂ ನಾವು ಯಾವೊಬ್ಬ ಅಧಿಕಾರಿಗೂ ಮಾನಸಿಕವಾಗಿ ಕಿರುಕುಳ, ತೊಂದರೆ ನೀಡುವ ಕೆಲಸ ಮಾಡಿಲ್ಲ. ಕಾನೂನು ಚೌಕಟ್ಟಿನಲ್ಲಿ ಅಧಿಕಾರಿಗಳು ಸಾರ್ವಜನಿಕರ ಪರವಾಗಿ ಕೆಲಸ ಮಾಡುವವರ ಬೆನ್ನಿಗೆ ನಮ್ಮ ಮಾಜಿ ಶಾಸಕರು ಯಾವತ್ತೂ ಇರುತ್ತಾರೆ. ಕಾನೂನು, ನೀತಿ-ನಿಯಮಗಳನ್ನು ಬಿಟ್ಟು ಅನೈತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಕೆಲಸ ನಾವುಗಳು ಮಾಡುವುದಿಲ್ಲ. ಒಂದು ವೇಳೆ ಪುರಸಭೆ ಮುಖ್ಯಾಧಿಕಾರಿಗಳು ಭ್ರಷ್ಟಾಚಾರ ಮಾಡಿದ ಬಗ್ಗೆ ತಮ್ಮಲ್ಲಿ ದಾಖಲೆಗಳಿದ್ದರೆ ಅವುಗಳನ್ನು ತಂದು ಸಾಬೀತು ಪಡಿಸಬೇಕು. ವೃಥಾ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡುವ ಕೆಲಸಕ್ಕೆ ಜೆಡಿಎಸ್ ಮುಖಂಡ ಬಂಡಿಯವರು ಮುಂದಾಗಬಾರದೆಂದು ಹೇಳಿದರು.

ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರು ಸೇರಿಕೊಂಡು ಮುಖ್ಯಾಧಿಕಾರಿಗಳು ಕಾನೂನು ಚೌಕಟ್ಟಿನಲ್ಲಿ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಸಾಥ್ ಕೊಡದೇ, ವಿನಾಕಾರಣ ಕೆಲಸದಲ್ಲಿ ತೊಂದರೆ ಕೊಡುತ್ತಿದ್ದಾರೆಂದು ಮುದುಕಪ್ಪ ನಾಯಕ ಆರೋಪಿಸುವ ಮೂಲಕ ಪುರಸಭೆ ಮುಖ್ಯಾಧಿಕಾರಿಗಳ ಬೆನ್ನಿಗೆ ನಾವಿದ್ದೇವೆ ಎಂದು ಪರೋಕ್ಷವಾಗಿ ಹೇಳಿದರು.

ಪುರಸಭೆ ನಾಮನಿರ್ದೇಶಿತ ಸದಸ್ಯ ಚನ್ನಬಸವ ಹಿರೇಮಠ, ಮುಖಂಡರಾದ ಪ್ರಭುಸ್ವಾಮಿ ಅತ್ನೂರು, ಅಬ್ದುಲ್ಲಾ ಬೇಕರಿ ಸೇರಿ ಇತರರು ಇದ್ದರು. 

Leave a Reply

Your email address will not be published. Required fields are marked *

error: Content is protected !!