ನೀರಿನ ತೊಂದರೆ ಉಲ್ಬಣಿಸದಂತೆ ಪಿಡಿಓಗಳು ಎಚ್ಚರಿಕೆ ವಹಿಸಲು ಸಿಇಓ ಸೂಚನೆ
ಲಿಂಗಸುಗೂರು : ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ಪಿಡಿಓಗಳು ಎಚ್ಚರಿಕೆ ವಹಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್‍ಆಸಿಫ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಾಲೂಕಿನ ಕೆಲ ಗ್ರಾಮ ಪಂಚಾಯತ್‍ಗಳಿಗೆ ಭೇಟಿ ನೀಡಿದ ಬಳಿಕ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ಯೋಜನೆ ಜೆಜೆಎಂ ಪ್ರತಿ ಮನೆಗೆ ನಳದ ನೀರು ಪೂರೈಸಲು ಪ್ರತಿ ಗ್ರಾಮ ಪಂಚಾಯಿತಿಗೆ ಆರಂಭಿಕವಾಗಿ 10 ಲಕ್ಷ ರೂಪಾಯಿ ಅನುದಾನ ನೀಡಲಿದೆ. 15ನೇ ಹಣಕಾಸಿನ ಅನುದಾನದಲ್ಲಿ ಶುದ್ಧ ಕುಡಿವ ನೀರು ಪೂರೈಸುವ ಗುರಿ ಇದ್ದು, ಆರ್ಸೆನಿಕ್ ಮಿಶ್ರಿತ ನೀರು ಪೂರೈಕೆ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಅಲ್ಲದೇ ಆರ್ಸೆನಿಕ್ ಮಿಶ್ರಿತ ನೀರು ಇರುವ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಪಂಚಾಯತ್ ಪಿಡಿಓಗಳು ಮುಂದಾಗಬೇಕು. ಯಾವುದೇ ಕಾರಣಕ್ಕೂ ಸಬೂಬು ಹೇಳದೇ, ಕ್ರಮಕ್ಕೆ ಮುಂದಾಗಬೇಕೆಂದು ಹೇಳಿದರು.
ನರೇಗಾ ಯೋಜನೆ ಕೆಲ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದು, ಯಾವುದೇ ಹಣಕಾಸಿನ ತೊಂದರೆ ಇಲ್ಲ. ಶೀಘ್ರ ಉದ್ಯೋಗ ಖಾತ್ರಿ ಕೆಲಸಗಳನ್ನು ಆರಂಭಿಸಲಾಗುವುದು. ಕೂಲಿಕಾರರಿಗೆ ಕೆಲಸ ನೀಡುವ ಯೋಜನೆಗಳನ್ನು ರೂಪಿಸಲಾಗುತ್ತದೆ. ಖಾತ್ರಿ ಯೋಜನೆಯಲ್ಲಿ ಯಂತ್ರ ಬಳಕೆಯ ಬಗ್ಗೆ ದೂರು ಬಂದರೆ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ನೀರಿನ ತೊಂದರೆಯಾಗದಂತೆ ಪಿಡಿಓಗಳು ಮುನ್ನೆಚ್ಚರಿಕೆ ಕ್ರಮವಹಿಸಲು ಸಿಇಓ ಸೂಚನೆ ನೀಡಿದರು.
ತಾ.ಪಂ. ಇಓ ಲಕ್ಷ್ಮಿದೇವಿ, ಜಿ.ಪಂ. ಎಇಇ ಶಿವಕುಮಾರ, ನರೇಗಾ ಎ.ಡಿ. ಸೋಮನಗೌಡ ಸೇರಿದಂತೆ ಇತರರು ಇದ್ದರು.

