ಮೀಟರ್ ರೀಡಿಂಗ್, ಕಂದಾಯ ವಸೂಲಿಯಲ್ಲಿ ವಿನಾಯಿತಿಗೆ ಮನವಿ
ಲಿಂಗಸುಗೂರು : ಕೊರೊನಾ ಮಹಾಮಾರಿ ಸೊಂಕಿನಿಂದ ದಿನದಿಂದ ದಿನಕ್ಕೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗುತ್ತಿರುವ ಪರಿಣಾಮ ಮೀಟರ್ ರೀಡಿಂಗ್ ಮತ್ತು ಕಂದಾಯ ವಸೂಲಾತಿಯಲ್ಲಿ ವಿನಾಯಿತಿ ನೀಡಬೇಕೆಂದು ಗ್ರಾಮ ವಿದ್ಯುತ್ ಪ್ರತಿನಿಧಿಗಳು ಮನವಿ ಮಾಡಿದ್ದಾರೆ.
ಜೆಸ್ಕಾಂ ಅಧಿಕಾರಿಗೆ ಮನವಿ ಸಲ್ಲಿಸಿದ ಅವರು, ಲಿಂಗಸುಗೂರು ಉಪವಿಭಾಗದಲ್ಲಿ ಸುಮಾರು ಹದಿನೇಳು ವರ್ಷಗಳಿಂದ ಯಾವುದೇ ಸೇವಾಭದ್ರತೆ ಕನಿಷ್ಠ ಸೌಲಭ್ಯ ಇಲ್ಲದೇ ಕನಿಷ್ಠ ವೇತನಕ್ಕೆ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ, ಈಗ ಮಹಾಮಾರಿ ರೋಗವು ಗ್ರಾಮೀಣ ಪ್ರದೇಶದಲ್ಲಿ ದಿನೇ ದಿನೇ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೋಗದ ಭಯ ನಮ್ಮನ್ನು ಕಾಡುತ್ತಿದೆ. ಮನೆ-ಮನೆಗೆ ತೆರಳಿ ಮಾಡುವ ಕೆಲಸ ಭಯದ ವಾತಾವರಣವನ್ನು ಸೃಷ್ಠಿಸಿದೆ.
ಒಂದುವೇಳೆ ನೇರವಾಗಿ ಮೆನಗಳಿಗೆ ತೆರಳಿ ಕಂದಾಯ ವಸೂಲಿ, ಮೀಟರ್ ರೀಡಿಂಗ್ ಮಾಡುವ ಸಂದರ್ಭದಲ್ಲಿ ಸೊಂಕಿಗೆ ತುತ್ತಾದರೆ, ನಮ್ಮನ್ನೇ ನಂಬಿಕೊಂಡ ಕುಟುಂಬಗಳ ಪಾಡೇನು.? ನಿಗಮದಿಂದ ನಮಗೆ ಯಾವುದೇ ತರಹದ ಸೇವಾ ಭದ್ರತೆ, ಕನಿಷ್ಠ ಆರೋಗ್ಯ ಭದ್ರತೆಯೂ ಇಲ್ಲದಂತಾಗಿದೆ. ಆದ್ದರಿಂದ ಮಹಾಮಾರಿ ಸೊಂಕು ಹತೋಟಿಗೆ ಬರುವವರೆಗೂ ನಮಗೆ ಮೀಟರ್ ರೀಡಿಂಗ್ ಮತ್ತು ಕಂದಾಯ ವಸೂಲಾತಿಯಲ್ಲಿ ವಿನಾಯತಿ ನೀಡಬೇಕೆಂದು ಮನವಿ ಮಾಡಿದರು.
ಪ್ರತಿನಿಧಿಗಳಾದ ಸಿದ್ದಣ್ಣ, ಜೈರಾಮ್, ಮೌಲಾಸಾಬ, ರಫೀಕ್ ಗುರುಗುಂಟ, ಬಸವರಾಜ, ಹೆಮಲಪ್ಪ ಸೇರಿ ಇತರರು ಇದ್ದರು.

