ಕರುನಾಡ ವಿಜಯಸೇನೆಯಿಂದ 101 ನೀರಿನ ಅರವಟ್ಟಿಗೆಗಳು : ಗಾಣದಾಳ
ಲಿಂಗಸುಗೂರು : ಬೇಸಿಗೆಯಲ್ಲಿ ಬಯಲು ಸೀಮೆಯ ಪ್ರದೇಶಗಳು ಅಕ್ಷರಶಃ ಕೆಂಡಾಮಂಡಲವಾಗುತ್ತವೆ. ನೆತ್ತಿಯ ಮೇಲಿನ ಸುಡು ಬಿಸಿಲ ತಾಪಕ್ಕೆ ಜನ ತತ್ತರಿಸುತ್ತಾರೆ. ರಸ್ತೆಯಲ್ಲಿ ಓಡಾಡುವ ಜನರ ದಾಹ ತಣಿಸಲು ಕರುನಾಡ ವಿಜಯಸೇನೆ ಸಂಘಟನೆ ವತಿಯಿಂದ ಉತ್ತರ ಕರ್ನಾಟಕ
ಭಾಗದಲ್ಲಿ 101 ನೀರಿನ ಅರವಟ್ಟಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಕರ್ನಾಟಕ ಉಸ್ತುವಾರಿ ಶಿವಪುತ್ರ ಗಾಣದಾಳ ಹೇಳಿದರು.
ಪಟ್ಟಣದ ಸಂತೆಬಜಾರ ಹಾಗೂ ಖಾದಿಬಂಡಾರ ಹತ್ತಿರ ಭಾನುವಾರ ಪೋಲಿಸ್ ಅಧಿಕಾರಿಗಳಾದ ಡಿವೈಎಸ್‍ಪಿ ಎಸ್‍ಎಸ್ ಹುಲ್ಲೂರು ಹಾಗೂ ಪಿಎಸ್‍ಐ ಪ್ರಕಾಶರೆಡ್ಡಿಯವರ ಮೂಲಕ ತಂಪಾದ ನೀರಿನ ಅರವಟ್ಟಿಗೆಗಳನ್ನು ಲೋಕಾರ್ಪಣೆ ಮಾಡಿಸಿದ ಬಳಿಕ ಮಾತನಾಡಿದ ಅವರು, ಸಂಘಟನೆ ರಾಜ್ಯಾಧ್ಯಕ್ಷ ದೀಪಕ್ ಅವರ ಆಶಯದಂತೆ ಉತ್ತರ ಕರ್ನಾಟಕ ಭಾಗದ
ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್, ಕೊಪ್ಪಳ, ಬಳ್ಳಾರಿ,ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಹುಬ್ಬಳ್ಳಿ, ಧಾರವಾಡ,ಬೆಳಗಾವಿ ಸೇರಿ ಪ್ರಮುಖ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ನೀರಿನ ಅರವಟ್ಟಿಗೆ ಘಟಕಗಳನ್ನು ಉದ್ಘಾಟಿಸಲು ಯೋಜನೆ ರೂಪಿಸಲಾಗಿದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು, ಮಸ್ಕಿ, ಮುದಗಲ್,
ಹಟ್ಟಿ, ಕವಿತಾಳ, ಸಿರವಾರ, ರಾಯಚೂರು ನಗರಗಳಲ್ಲಿ
ಅರಟ್ಟಿಗೆಗಳನ್ನು ಆರಂಭಿಸಲಾಗುವುದು. ಅದರ ಆರಂಭಿಕ ಭಾಗವಾಗಿ ಪೋಲಿಸ್ ಅಧಿಕಾರಿಗಳಿಂದ ಇಂದು ಅರವಟ್ಟಿಗೆಗಳ ಲೋಕಾರ್ಪಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ
ಪಡೆದುಕೊಳ್ಳಬೇಕೆಂದು ಗಾಣದಾಳ ಕರೆ ನೀಡಿದರು.
ಜನಪರವಾದ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತು ಕೆಲಸ
ಮಾಡುತ್ತಿರುವ ಕರುನಾಡ ವಿಜಯಸೇನೆ ಸಂಘಟನೆ ಇತರೆ
ಸಂಘಟನೆಗಳಿಗೆ ಮಾದರಿಯಾಗಿದೆ. ಯಾವುದೇ ಅನ್ಯ ವಿಚಾರಗಳಿಗೆ ತಲೆ ಹಾಕದೇ ಅಸಹಾಯಕ, ಬಡವರ ಪರವಾಗಿ ಕೆಲಸ ಮಾಡುತ್ತಿರುವ ನೂತನ ಸಂಘಟನೆಗೆ ಶುಭವಾಗಲಿ. ಸಾರ್ವಜನಿಕರು ಪಟ್ಟಣದಲ್ಲಿ
ಆರಂಭವಾಗಿರುವ ನೀರಿನ ಅರವಟ್ಟಿಗೆಗಳ ಸದ್ಬಳಕೆ
ಮಾಡಿಕೊಳ್ಳಬೇಕೆಂದು ಡಿವೈಎಸ್‍ಪಿ ಎಸ್‍ಎಸ್‍ಹುಲ್ಲೂರು ಮಾತನಾಡಿದರು.
ಸಂಘಟನೆಯ ಜಿಲ್ಲಾದ್ಯಕ್ಷ ಎಂ.ಸಿ.ಚಂದ್ರಶೇಖರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುತ್ತಣ್ಣ ಗುಡಿಹಾಳ, ತಾಲೂಕು ಗೌರವ ಸಲಹೆಗಾರ ಬಾಲನಗೌಡ ಕುಪ್ಪಿಗುಡ್ಡ,ಮುಖಂಡರಾದ ರಮೇಶ ಸುಂಕದ್, ಸುರೇಶ
ಮಡಿವಾಳ, ಭದ್ರಿನಾಥ ಕರಡಕಲ್, ಅಮರೇಶ ಶೆಟ್ಟರ್, ಮಾದೇಶ ಸರ್ಜಾಪೂರ, ರಾಜು ರೆಡ್ಡಿ, ಮಲ್ಲು ಹಿರೇಮಠ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

