ಲಿಂಗಸುಗೂರು ಪಟ್ಟಣದೆಲ್ಲೆಡೆ ಜನವೋ ಜನ..! ಲಾಕ್‍ಡೌನ್ ಎಫೆಕ್ಟ್ : ದುಪ್ಪಟ್ಟು ದರಕ್ಕೆ ತರಕಾರಿ, ಸೊಪ್ಪು ಮಾರಾಟ..!
ವರದಿ : ಖಾಜಾಹುಸೇನ್
ಲಿಂಗಸುಗೂರು : ಕಳೆದ ಮೂರು ದಿನಗಳಿಂದ ಸಂಪೂರ್ಣವಾಗಿ ಲಾಕ್‍ಡೌನ್ ಆಗಿದ್ದ ಜಿಲ್ಲೆಗೆ ಬುಧುವಾರ ದಿನದಂದು ಮಧ್ಯಾಹ್ನ 12 ಗಂಟೆವೆರೆಗೆ ಸಡಿಲಿಕೆ ನೀಡಿದ್ದ ಪರಿಣಾಮ ಪಟ್ಟಣದಲ್ಲಿ ಎಲ್ಲಿ ನೋಡಿದರೂ ಜನವೋ ಜನ. ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಜನರು ರಸ್ತೆ ಮೇಲೆ ಕಂಡು ಬಂತು. ಲಾಕ್‍ಡೌನ್ ಎಫೆಕ್ಟ್‍ಗೆ ತರಕಾರಿ ವ್ಯಾಪಾರಿಗಳು ದುಪ್ಪಟ್ಟು, ಮೂರು ಪಟ್ಟು ದರಕ್ಕೆ ತರಕಾರಿ ಸೊಪ್ಪು ಮಾರಾಟಕ್ಕೆ ಮುಂದಾಗಿದ್ದರು. ಬೆಲೆ ಏರಿಕೆಯ ಬಿಸಿ ಬಡವರ ಪಾಲಿಗೆ ನುಂಗದ ತುತ್ತಾಗಿ ಪರಿಣಮಿಸಿತ್ತು.

ಸ್ಥಳೀಯ ಎಪಿಎಂಸಿಯಲ್ಲಿ ನಸುಕಿನಲ್ಲಿ ನಡೆಯುವ ತರಕಾರಿ ಸಗಟು ವ್ಯಾಪಾರದಲ್ಲಿ ವ್ಯಾಪಾರಿಗಳು ಕಡಿಮೆ ದರಕ್ಕೆ ತರಕಾರಿ, ಸೊಪ್ಪು ಖರೀದಿಸಿ ಹೆಚ್ಚಿನ ದರಕ್ಕೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರು. ನಾಲ್ಕಾರು ದಿನಗಳ ಹಿಂದೆ 10 ರೂಪಾಯಿಗೆ 5 ಕೊತ್ತಂಬರಿ ಸೊಪ್ಪು ಮಾರಾಟವಾಗುತ್ತಿತ್ತು. ಆದರೆ, ಇಂದು ನಡೆದ ಮಾರುಕಟ್ಟೆಯಲ್ಲಿ 10 ರೂಪಾಯಿಗೆ ಒಂದು ಕೊತ್ತಂಬರಿ ಸೊಪ್ಪು ಮಾರಾಟ ಮಾಡುತ್ತಿದ್ದರು. ಯಾಕೆ ಹೀಗೆಂದು ವಿಚಾರಿಸಿದರೆ, ಬೆಲೆ ಏರಿಕೆ ಆಗಿದೆ ಬೇಕಿದ್ದರೆ ಕೊಳ್ಳಿ ಇಲ್ಲಾಂದ್ರೆ ಬಿಡಿ ಎನ್ನುವ ಬಿರುಸಿನ ಮಾತುಗಳು ವ್ಯಾಪಾರಿಗಳಲ್ಲಿ ಕೇಳಿ ಬರುತ್ತಿದ್ದವು. ತರಕಾರಿ ಸೊಪ್ಪು ಕೊಳ್ಳಲು ಮಾರುಕಟ್ಟೆಗೆ ಬಂದಿದ್ದ ಬಡವರು, ಕೂಲಿ ಕಾರ್ಮಿಕರು ಮಾತ್ರ ಬೆಲೆ ಏರಿಕೆ ಕಂಡು ನಿಬ್ಬೆರಗಾಗಿದ್ದಂತೂ ಸುಳ್ಳಲ್ಲ.

ಟ್ರಾಫಿಕ್ ಜಾಮ್
ಬುಧವಾರ ಒಂದು ದಿನ ಮಧ್ಯಾಹ್ನ 12ರ ವರೆಗೆ ಓಪನ್ ನಂತರ ಮೂರು ದಿನ ಮತ್ತೆ ಸಂಪೂರ್ಣ ಲಾಕ್ ಎನ್ನುವ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಕೊಳ್ಳಲು ಗುಂಪು ಗುಂಪಾಗಿ ರಸ್ತೆಗಿಳಿದಿದ್ದರು. ಬೈಕ್, ಸ್ಕೂಟರ್, ಕಾರು, ಜೀಪು, ಅಟೋ, ಟಂಟಂ ಸೇರಿ ನೂರಾರು ವಾಹನಗಳು ರಸ್ತೆಗಿಳಿದ ಪರಿಣಾಮ ಪಟ್ಟಣದ ಬಸ್ಟಾಂಡ್ ವೃತ್ತ, ಕಾಲೇಜು ಮೈದಾನದ ಎದುರು, ಅಂಚೇ ಕಚೇರಿ ವೃತ್ತ, ಬಸವಸಾಗರ ವೃತ್ತ, ಬೈಪಾಸ್ ರಸ್ತೆ ಸೇರಿ ಮಾರುಕಟ್ಟೆ ಇರುವ ಪ್ರದೇಶಗಳ ರಸ್ತೆಗಳೆಲ್ಲಾ ಟ್ರಾಫಿಕ್ ಜಾಮ್ ಆಗಿದ್ದವು. ವಾಹನಗಳ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ತರಲು ಆರಕ್ಷಕರು ಹರಸಾಹಸ ಪಡುವ ದೃಶ್ಯಗಳು ಕಂಡು ಬಂದವು.
ಕನಿಷ್ಠ ದರಕ್ಕೆ ತರಕಾರಿ, ಸೊಪ್ಪು ಮಾರಾಟ ಮಾಡಬೇಕೆನ್ನುವ ನಿಯಮ ಇದ್ದಾಗ್ಯೂ ಬಡವರ ಕೈಗೆಟುಕದ ದರ ಇಂದಿನ ಮಾರುಕಟ್ಟೆಯಲ್ಲಿ ನಿಗದಿಯಾಗಿದ್ದು ಕಂಡು ಬಂತು. ನಿಯಮಗಳನ್ನು ಗಾಳಿಗೆ ತೂರಿದ ವ್ಯಾಪಾರಿಗಳು ತಾವೇಳಿದ್ದೇ ರೇಟು ಎನ್ನುವಷ್ಟರ ಮಟ್ಟಿಗೆ ಹೆಚ್ಚಿನ ಬೆಲೆಗೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡಿದರು. ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಕರವೇ ಅದ್ಯಕ್ಷ ಜಿಲಾನಿಪಾಷಾ ಅಧಿಕಾರಿಗಳ ಗಮನಕ್ಕೆ ತರಲು ಯತ್ನಿಸಿದರಾದರೂ ಯಾರೊಬ್ಬರೂ ಪ್ರತಿಕ್ರಿಯೆ ನೀಡಲಿಲ್ಲ ಎನ್ನುವ ಆರೋಪಗಳು ಕೇಳಿಬಂದವು.
ಮೂರು ದಿನಗಳ ಕಾಲದ ಲಾಕ್‍ಡೌನ್ ಬಳಿಕ ಪುನಃ ತರಕಾರಿ, ಸೊಪ್ಪು ಮಾರುಕಟ್ಟೆ ಆರಂಭವಾಗುವ ಹೊತ್ತಿಗೆ ಬಡವರ ಕೈಗೆಟುಕುವ ದರಕ್ಕೆ ತರಕಾರಿ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯಗಳು ಕೇಳಿ ಬಂದವು. ಆಡಳಿತ ಈ ಬಗ್ಗೆ ಎಷ್ಟರ ಮಟ್ಟಿಗೆ ಕ್ರಮಕ್ಕೆ ಮುಂದಾಗುವುದೋ ಕಾದು ನೋಡಬೇಕಿದೆ.
‘ತರಕಾರಿ, ಸೊಪ್ಪು, ಹಣ್ಣುಗಳ ಬೆಲೆಗಳು ದುಬಾರಿಯಾಗಿದ್ದು, ಬಡವರು, ಕೂಲಿಕಾರ್ಮಿಕರಿಗೆ ಕೊಳ್ಳಲು ಆಗುತ್ತಿಲ್ಲ. ಶ್ರೀಮಂತರು ಹೇಗೋ ನಿಭಾಯಿಸುತ್ತಾರೆ. ಆದರೆ, ಬಡವರು ದುಡಿಮೆ ಇಲ್ಲದೇ ಕೊರಗುತ್ತಿದ್ದಾರೆ. ಇಂಥಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಸಾಲ ಸೋಲ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅಂಥಹ ಬಡವರು ಹೇಗೆ ದುಬಾರಿ ಬೆಲೆಗೆ ತರಕಾರಿ ಕೊಳ್ಳಲು ಸಾಧ್ಯ. ಕೂಡಲೇ ಜಿಲ್ಲಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬಡವರಿಗೆ ಕೈಗೆಟುಕುವ ದರದಲ್ಲಿ ತರಕಾರಿ, ಸೊಪ್ಪು ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕು.’ – ಜಿಲಾನಿಪಾಷಾ, ಕರವೇ ಅದ್ಯಕ್ಷ.

