ಲಾಕ್‍ಡೌನ್‍ನಿಂದ ಸಂಕಷ್ಟ : ಹಡಪದ್ ಸಮಾಜಕ್ಕೆ ನೆರವಾಗಲು ಆಗ್ರಹ
ಲಿಂಗಸುಗೂರು : ಸತತ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಒಳಗಾಗಿರುವ ತಾಲೂಕಿನ ಹಡಪದ್ ಸಮಾಜಕ್ಕೆ ನೆರವಾಗಬೇಕೆಂದು ಹಡಪದ್ ಅಪ್ಪಣ್ಣ ಯುವ ಘಟಕದ ಅದ್ಯಕ್ಷ ಶರಣಬಸವ ಈಚನಾಳ ಆಗ್ರಹಿಸಿದರು.
ಸ್ಥಳೀಯ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ತಾಲೂಕಿನಾದ್ಯಂತ ಸುಮಾರು 230 ಕ್ಷೌರಿಕ ಅಂಗಡಿಗಳು ಬಂದ್ ಆಗಿವೆ. ದುಡಿಮೆ ಇಲ್ಲದೇ ಜೀವನ ನಡೆಸುವುದು ಸಮಾಜ ಬಾಂಧವರಿಗೆ ಕಷ್ಟವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಅಂಗಡಿಗೆ ಜಾಗವಿಲ್ಲದೇ ರಸ್ತೆ ಬದಿಯಲ್ಲಿ ಕುಳಿತು ಕ್ಷೌರ ಮಾಡುವ ಸ್ಥಿತಿ ಇದೆ. ಹೀಗಾಗಿ ಕುಲವೃತ್ತಿಯನ್ನೇ ನಂಬಿರುವ ಕುಟುಂಬಗಳು ಬೀದಿಗೆ ಬಂದಿವೆ. ಕೊರೊನಾ ಭಯದಿಂದ ಜನರು ಕಳೆದ ವರ್ಷದಿಂದ ಕ್ಷೌರಸೇವೆ ಪಡೆಯಲು ಹಿಂದೇಟು ಹಾಕುತ್ತಿರುವುದರಿಂದ ಕ್ಷೌರಿಕರು ಶಾಶ್ವತ ದುಡಿಮೆ ಕಳೆದುಕೊಳ್ಳುವ ಹಂತಕ್ಕೆ ಬಂದಿರುವುದು ದುರಂತ.
ಕೂಡಲೇ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಹಡಪದ್ ಸಮಾಜದ ಬಾಂಧವರಿಗೆ ಜೀವನ ನಿರ್ವಹಣೆಗೆಂದು ವೃತ್ತಿನಿರತರಿಗೆ ಇಪ್ಪತ್ತು ಸಾವಿರ ರೂಪಾಯಿ ಪರಿಹಾರ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಕ್ಷೌರಿಕರು ಪಡೆದಿರುವ ಒಂದು ಲಕ್ಷ ರೂಪಾಯಿವರೆಗಿನ ಸಾಲ ಮತ್ತು ಬಡ್ಡಿ ಮನ್ನಾ ಮಾಡಬೇಕು. ಡಿಸಿಸಿ ಬ್ಯಾಂಕ್ ಮತ್ತು ಸಹಕಾರ ಸಂಘಗಳಿಂದ ಪಡೆದ ಸಾಲಮನ್ನಾ ಮಾಡಬೇಕು. ವಿವಿಧ ಸ್ವಸಹಾಯ ಸಂಘಗಳಿಂದ ಪಡೆದ ಸಾಲಗಳಿಗೆ ರಿಯಾಯಿತಿ ಹಾಗೂ ಕೋವಿಡ್-19ನಿಂದ ಮೃತಪಟ್ಟ ಕ್ಷೌರಿಕ ಕುಟುಂಬದ ನಿರ್ವಹಣೆಗೆ ಸರಕಾರ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ಯುವ ಘಟಕದ ಗೌರವಾದ್ಯಕ್ಷ ಕುಮಾರಸ್ವಾಮಿ ಕಸಬಾಲಿಂಗಸುಗೂರು, ಪ್ರಧಾನ ಕಾರ್ಯದರ್ಶಿ ಚೂಡಾಮಣಿ ಚಿತ್ತಾಪೂರ, ಜಗನ್ನಾಥ, ಸಂಗಮೇಶ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

